ಪಂಚಾಯತ್ ರಾಜ್ ಕಾಯ್ದೆ ಜಾರಿಯಿಂದಲೇ ಎಲ್ಲರಿಗೂ ಅಧಿಕಾರ: ಸಿದ್ದರಾಮಯ್ಯ

ಬೆಂಗಳೂರು, ಮೇ 10: ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ರೂಪಿಸಿ ಜಾರಿಗೆ ತಂದಿದ್ದರಿಂದಲೇ ಇಂದು ಎಲ್ಲ ಜನಾಂಗದವರಿಗೂ ಅಧಿಕಾರ ಸಿಗಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ನಗರದ ಅರಮನೆ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1993 ಅನುಷ್ಠಾನಗೊಂಡ ಸಂದರ್ಭದ ರಜತ ಮಹೋತ್ಸವ ಹಾಗೂ ರಾಜ್ಯ ಸರಕಾರದ ಸಾಧನೆಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಅಧಿಕಾರವನ್ನು ವಿಕೇಂದ್ರಿಕರಣ ಮಾಡಲು ಪ್ರಯತ್ನಿಸಿದಾಗ ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರವನ್ನು ವಿಕೇಂದ್ರಿಕರಣ ಮಾಡುವುದರಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂಬ ಆರೋಪ ಮಾಡಿದರು. ಆದರೆ, ಇಲ್ಲಿಯವರೆಗೆ ಅಧಿಕಾರ ವಿಕೇಂದ್ರಿಕರಣದಿಂದ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1993ರ ಅನ್ನು ತಿದ್ದುಪಡಿ ಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯತ್ವ ಸ್ಥಾನದಲ್ಲಿ ಶೇ.51ರಷ್ಟು ಮೀಸಲಾತಿ ಹಾಗೂ ಶೇ.33ರಷ್ಟು ಮಹಿಳೆಯರಿಗೆ ಮೀಸಲಾತಿಯನ್ನು ನೀಡಲಾಯಿತು. ಆದರೆ, ಇಂದು ನಡೆಯುತ್ತಿರುವ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಹಿಳಾ ಜನಪ್ರತಿನಿಧಿಗಳು ಕಾಣಿಸದೆ ಬರೀ ಅವರ ಗಂಡಂದಿರು ಕಾಣಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
2015ರಲ್ಲಿ ಕರ್ನಾಟಕ ಸರಕಾರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ, ಕಡ್ಡಾಯ ಮತದಾನ ಹಾಗೂ ವೇತನವನ್ನು ಹೆಚ್ಚಳ ಮಾಡುವ ಕೆಲಸ ಮಾಡಲಾಯಿತು ಎಂದು ತಿಳಿಸಿದರು.
ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ರಾಜಕಾರಣದಲ್ಲಿ ಹಲವು ವ್ಯತ್ಯಾಸಗಳು ಆಗಬಹುದು. ಆದರೆ, ಅಭಿವೃದ್ಧಿ ಎಂಬ ವಿಚಾರಗಳು ಬಂದಾಗ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೂರಕ್ಕೆ ನೂರರಷ್ಟು ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇನೆ. ಅಲ್ಲದೆ, ಅಧಿಕಾರ ವಿಕೇಂದ್ರಿಕರಣ ಆಗಿ ಎಲ್ಲರಿಗೂ ಅಧಿಕಾರದ ಜವಾಬ್ದಾರಿ ಸಿಕ್ಕಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1973-74ರ ತಿದ್ದುಪಡಿ ಕಾಯ್ದೆಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಅಲ್ಲದೆ, ಜನಪ್ರತಿನಿಧಿಗಳಿಗೂ ಶಿಕ್ಷಣ ಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಇವೆಲ್ಲವುಗಳಿಗೂ ಸಹಮತದ ಅ ವಶ್ಯಕತೆ ಇದೆ ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ-1993ರ ಅನುಷ್ಠಾನಗೊಂಡ ನಂತರ ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ಮೀಸಲಾತಿ ಸಿಗಲಾರಂಭಿಸಿತು ಎಂದು ಹೇಳಿದರು.ಕೇಂದ್ರದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಬೇಕಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಡಿಸೆಂಬರ್‌ನಲ್ಲಿ ಪ್ಲಾನಿಂಗ್ ಬೋರ್ಡ್ ಮಾಡಲಾಗುತ್ತಿದ್ದು, ಈ ಬೋರ್ಡ್ ಅನುಸಾರ ಸರಕಾರದ ಎಲ್ಲ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಲಾಗುವುದು ಎಂದು ಹೇಳಿದರು.
2017ರ ಅಕ್ಟೋಬರ್ 2ರ ಒಳಗಾಗಿ ಬಯಲು ಮುಕ್ತ ಶೌಚಾಲಯ ರಾಜ್ಯವನ್ನಾಗಿ ಮಾಡಲಾಗುವುದು. ಇದಕ್ಕೆ ಬೇಕಾಗುವ ಹಣವನ್ನು ಕೇಂದ್ರ ಸರಕಾರ ಒದಗಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಆಂಜನೇಯ, ರುದ್ರಪ್ಪ ಲಮಾಣಿ, ಎ.ಮಂಜು, ಶಾಸಕ ಜಿ.ಎಸ್.ಪಾಟೀಲ್, ಮಾಜಿ ಶಾಸಕ ಡಿ.ಆರ್.ಪಾಟೀಲ್ ಉಪಸ್ಥಿತರಿದ್ದರು.







