ಶ್ರೀಶೈಲದಲ್ಲಿ ಯಾತ್ರಿಕರಿಗಾಗಿ ಅಗತ್ಯ ಸೌಲಭ್ಯ: ಸಿದ್ದರಾಮಯ್ಯ

ಬೆಂಗಳೂರು, ಮೇ 10: ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಅಕ್ಕ ಮಹಾದೇವಿ ನೆಲೆಸಿದ್ದ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕನ್ನಡಿಗ ಯಾತ್ರಿಕರು ಉಳಿದುಕೊಳ್ಳಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷ ರಾಜ್ಯದಿಂದ ಲಕ್ಷಾಂತರ ಯಾತ್ರಿಕರು ಶ್ರೀಶೈಲಕ್ಕೆ ತೆರಳುತ್ತಾರೆ. ಆದರೆ, ಅಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಕೊರತೆಗಳಿಂದ ಕನ್ನಡಿಗ ಯಾತ್ರಿಕರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರಕಾರ ಹಾಗೂ ಮುಜರಾಯಿ ಇಲಾಖೆಯ ಜೊತೆ ಮಾತನಾಡಿ ರಾಜ್ಯ ಸರಕಾರದಿಂದ ಸಾಧ್ಯವಾಗುವ ಎಲ್ಲ ನೆರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ನಾಡಿನ ಜನತೆ ಉತ್ತಮ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಸೌಹಾರ್ದಯುತ ವಾತಾವರಣದ ನಿರ್ಮಾಣವಾಗಬೇಕೆಂಬ ಸದುದ್ದೇಶದಿಂದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಜಗತ್ತಿಗೆ ಮಾನವೀಯ ಸಂದೇಶ ಸಾರಿದ ಪ್ರತಿಯೊಬ್ಬ ಸಾಧಕರ ಜಯಂತಿಯನ್ನು ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೂರ್ಯಸಿಂಹಾಸನ ಪಂಡಿತಾರಾಧ್ಯ ಮಹಾಪೀಠದ ಡಾ.ಚನ್ನಸಿದ್ಧರಾಮ ಸ್ವಾಮೀಜಿ ಮಾತನಾಡಿ, ಸರಕಾರದ ವತಿಯಿಂದಲೇ ಬಸವಣ್ಣ, ಅಕ್ಕಮಹಾದೇವಿ ಹಾಗೂ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಆಚರಿಸುವ ಮೂಲಕ ರಾಜ್ಯದ ಆರು ಕೋಟಿ ಜನತೆಗೂ ಮಾನವೀಯ ವೌಲ್ಯಗಳನ್ನು ತಲುಪಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೇಮರೆಡ್ಡಿ ಮಲ್ಲಮ್ಮ ಕುಟುಂಬ ವ್ಯವಸ್ಥೆಗೆ ಉತ್ತಮ ವೌಲ್ಯಗಳನ್ನು ಹಾಕಿಕೊಟ್ಟಿದ್ದಾರೆ. ಅವರ ವೌಲ್ಯಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಕುಟುಂಬದ ಕಲಹಗಳಿಗೆ ಆಸ್ಪದವೇ ಇರುವುದಿಲ್ಲ. ಹಾಗೂ ಕೃಷಿ ಬದುಕಿನ ಉತ್ತೇಜನಕ್ಕೂ ಹೇಮರೆಡ್ಡಿ ಮಲ್ಲಮ್ಮರ ಬದುಕು ನಮ್ಮಗೆ ಸ್ಫೂರ್ತಿಯಾಗಬಲ್ಲದು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ಆದಿ ಚುಂಚನಗಿರಿ ಪೀಠದ ಸೌಮ್ಯನಾಥ ಸ್ವಾಮೀಜಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಉಪಸಭಾಪತಿ ಶಿವಶಂಕರ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಬೇಕೆಂದು ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಬಹುಜನರ ಆಶಯವಾಗಿದೆ. ಆದರೆ, ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಆ ಪ್ರಕರಣವನ್ನು ಕೂಡಲೆ ಬಗೆಹರಿಸಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು -ಸಿದ್ದರಾಮಯ್ಯ ಮುಖ್ಯಮಂತ್ರಿ







