ಚಾಂಪಿಯನ್ಸ್ ಟ್ರೋಫಿಯಲ್ಲಿ ಮೈಲುಗಲ್ಲು ತಲುಪಲಿರುವ ಶುಐಬ್ ಮಲಿಕ್

ಲಾಹೋರ್,ಮೇ 10: ಇಂಗ್ಲೆಂಡ್‌ನಲ್ಲಿ ಜೂ.1 ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ತಂಡಗಳನ್ನು ಐಸಿಸಿ ಬುಧವಾರ ದೃಢಪಡಿಸಿದೆ. ಸತತ ಆರನೆ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ಪಾಕಿಸ್ತಾನದ ಆಲ್‌ರೌಂಡರ್ ಶುಐಬ್ ಮಲಿಕ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ತಲುಪಲಿದ್ದಾರೆ.
ಈ ಮೂಲಕ ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ರಾಹುಲ್ ದ್ರಾವಿಡ್(ಭಾರತ), ಡೇನಿಯಲ್ ವೆಟೋರಿ(ನ್ಯೂಝಿಲೆಂಡ್), ಮಾರ್ಕ್ ಬೌಚರ್ ಹಾಗೂ ಜಾಕ್ ಕಾಲಿಸ್(ದಕ್ಷಿಣ ಆಫ್ರಿಕ) ಹಾಗೂ ಸನತ್ ಜಯಸೂರ್ಯ, ಮಹೇಲ ಜಯವರ್ಧನೆ ಹಾಗೂ ಕುಮಾರ ಸಂಗಕ್ಕರ (ಶ್ರೀಲಂಕಾ)ಅವರಂತಹ ಸಾಧಕರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ಐಸಿಸಿ ಪ್ರಕಾರ ಮಲಿಕ್ 2002ರಲ್ಲಿ ಕೊಲಂಬೊದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿ ಆಡಿದ್ದಾರೆ.
35ರ ಹರೆಯದ ಮಲಿಕ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 15 ಪಂದ್ಯಗಳನ್ನು ಆಡಿದ್ದು, 326 ರನ್ ಹಾಗೂ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ವರೆಗೆ 247 ಏಕದಿನ ಪಂದ್ಯಗಳನ್ನು ಆಡಿರುವ ಮಲಿಕ್ ಜೂ.12 ರಿಂದ ಕಾರ್ಡಿಫ್‌ನಲ್ಲಿ ಶ್ರೀಲಂಕಾದಲ್ಲಿ ಮೂರನೆ ಏಕದಿನ ಪಂದ್ಯವನ್ನು ಆಡಿದರೆ 250 ಹಾಗೂ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ವಿಶ್ವದ 42ನೆ ಆಟಗಾರ ಎನಿಸಿಕೊಳ್ಳುತ್ತಾರೆ.
‘‘ಐಸಿಸಿ ಚಾಂಪಿಯನ್ಸ್ ಟ್ರೋಫಿಯಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಕಿಸ್ತಾನ ತಂಡದಲ್ಲಿ ಆಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಆರು ಟೂರ್ನಿಗಳನ್ನು ಆಡಿರುವ ಮಾಜಿ ಆಟಗಾರರ ಸಾಲಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕ್ರಿಕೆಟ್‌ನ ಶ್ರೇಷ್ಠ, ಸಭ್ಯ ಆಟಗಾರರೊಂದಿಗೆ ಸ್ಥಾನ ಪಡೆದಿರುವುದು ನನಗೆ ಲಭಿಸಿದ ಮಹಾಗೌರವ’’ಎಂದು ಮಲಿಕ್ ತಿಳಿಸಿದರು.







