ಚಾಂಪಿಯನ್ಸ್ ಟ್ರೋಫಿಗೆ ಅರ್ಥಪೂರ್ಣ ಕೊಡುಗೆ ನೀಡುವೆ: ಯುವರಾಜ್

ದುಬೈ, ಮೇ 10: ‘‘ಇಂಗ್ಲೆಂಡ್‌ನಲ್ಲಿ ಜೂ.1 ರಿಂದ 18ರ ತನಕ ನಡೆಯಲಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಅರ್ಥಪೂರ್ಣ ಕೊಡುಗೆ ನೀಡಲು ಬಯಸಿದ್ದೇನೆ’’ ಎಂದು ಭಾರತದ ಹಿರಿಯ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೇಳಿದ್ದಾರೆ.
‘‘ಐಸಿಸಿ 50 ಓವರ್ ಟೂರ್ನಮೆಂಟ್‌ನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಮತ್ತೊಮ್ಮೆ ಆಡುವ ಅವಕಾಶ ಲಭಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಂತಾಗಲು ಅರ್ಥಪೂರ್ಣ ಕಾಣಿಕೆ ನೀಡಲು ಎದುರು ನೋಡುತ್ತಿರುವೆ’’ ಎಂದು ಯುವಿ ತಿಳಿಸಿದ್ದಾರೆ.
‘‘ಇತರ ಐಸಿಸಿ ಟೂರ್ನಮೆಂಟ್‌ಗಳಂತೆಯೇ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಕೂಡ ಸವಾಲಿನಿಂದ ಕೂಡಿದ್ದು, ದಿ ಓವಲ್‌ನಲ್ಲಿ ಜೂ.18 ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯಲು ಪ್ರತಿಯೊಂದು ತಂಡಗಳು ಯೋಜನೆ ಹಾಕಿಕೊಂಡಿವೆ. ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವಿನ ತೀವ್ರತೆಯನ್ನು ಮುಂದುವರಿಸಿಕೊಂಡು ಹೋಗಲು ಬಯಸಿದ್ದು, ಆಸ್ಟ್ರೇಲಿಯದ ಬಳಿಕ ಚಾಂಪಿಯನ್ಸ್ ಟ್ರೋಫಿಯನ್ನು ಎರಡನೆ ಬಾರಿ ಗೆದ್ದ ತಂಡ ಎನಿಸಿಕೊಳ್ಳುವತ್ತ ಚಿತ್ತವಿರಿಸಿದೆ’’ ಎಂದು ಯುವರಾಜ್ ಸಿಂಗ್ ನುಡಿದರು.
ಕೀನ್ಯದಲ್ಲಿ 2000ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯ ಆಡಿರುವ ಯುವರಾಜ್ 2006ರ ತನಕ ಎಲ್ಲ ಟೂರ್ನಿಗಳಲ್ಲೂ ಭಾಗವಹಿಸಿದ್ದಾರೆ. 2009 ಹಾಗೂ 2013 ಆವೃತ್ತಿಯ ಟೂರ್ನಿಗಳಲ್ಲಿ ಆಡಿಲ್ಲ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕ ಹಾಗೂ ಶ್ರೀಲಂಕಾ ತಂಡಗಳಿರುವ ಗುಂಪಿನಲ್ಲಿ ಸ್ಥಾನ ಪಡೆದಿದೆ.







