ಐಸಿಸಿ ಮುಖ್ಯಸ್ಥ ಹುದ್ದೆಯಲ್ಲಿ ಶಶಾಂಕ್ ಮುಂದುವರಿಕೆ

ದುಬೈ, ಮೇ 10: ಶಶಾಂಕ್ ಮನೋಹರ್ ಅವರು ಐಸಿಸಿ ಮುಖ್ಯಸ್ಥರಾಗಿ 2018ರ ಜೂನ್ ತನಕ ಮುಂದುವರಿಯಲಿದ್ದು, ತಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ದೃಢಪಡಿಸಿದೆ.
59ರ ಹರೆಯದ ಶಶಾಂಕ್ ‘‘ವೈಯಕ್ತಿಕ ಕಾರಣಗಳಿಂದ’’ ಈವರ್ಷದ ಮಾರ್ಚ್‌ನಲ್ಲಿ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಐಸಿಸಿ ಪೂರ್ಣ ಸದಸ್ಯರು ಹಾಗೂ ಅಸೋಸಿಯೇಟ್ಸ್‌ಗಳು ಶಶಾಂಕ್‌ರಿಗೆ ಮುಖ್ಯಸ್ಥರಾಗಿ ಮುಂದುವರಿಯುವಂತೆ ಒತ್ತಾಯ ಮಾಡಿದ್ದವು. ಐಸಿಸಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕೆಲವು ಸುಧಾರಣೆಗಳ ಪ್ರಕ್ರಿಯೆ ಮುಗಿಯವ ತನಕ ಮುಖ್ಯಸ್ಥ ಸ್ಥಾನದಲ್ಲಿ ಮುಂದುವರಿಯುವಂತೆ ಆಗ್ರಹಿಸಲಾಗಿತ್ತು.
ಶಶಾಂಕ್ ಮನೋಹರ್ 2018ರ ಜೂನ್ ತನಕ ಐಸಿಸಿಯ ಸ್ವತಂತ್ರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ದೃಢಪಡಿಸಿದೆ. ಈ ವರ್ಷದ ಜೂನ್‌ನಲ್ಲಿ ನಡೆಯುವ ಐಸಿಸಿ ವಾರ್ಷಿಕ ಸಮ್ಮೇಳನದ ತನಕ ಮುಖ್ಯಸ್ಥ ಸ್ಥಾನದಲ್ಲಿರಲು ಶಶಾಂಕ್ ಬಯಸಿದ್ದರು. ಇತ್ತೀಚೆಗೆ ತನ್ನ ಮನಸ್ಸನ್ನು ಬದಲಾಯಿಸಿದ್ದರು. ಪ್ರಸ್ತಾವಿತ ನೂತನ ಆದಾಯ ಹಾಗೂ ಆಡಳಿತ ಮಾದರಿಯ ಬಗ್ಗೆ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಗ್ಪುರದ ವಕೀಲರಾದ ಶಶಾಂಕ್‌ಗೆ ಹೊಸ ಶಕ್ತಿ ಬಂದಂತಾಗಿದೆ. ಐಸಿಸಿ ಹೊಸ ಪ್ರಸ್ತಾವಕ್ಕೆ ಬಿಸಿಸಿಐಯಿಂದ ಮಾತ್ರ ಆಕ್ಷೇಪ ವ್ಯಕ್ತವಾಗಿತ್ತು.







