ದ.ಕ. ಅಂಗನವಾಡಿಗಳಿಗೆ ‘ಎಸಿ ಭಾಗ್ಯ’!
ಆರಂಭದಲ್ಲಿ ಹತ್ತು ಅಂಗನವಾಡಿಗಳಿಗೆ ಅಳವಡಿಕೆ

ಮಂಗಳೂರು, ಮೇ 10: ಅಂಗನವಾಡಿ ಮಕ್ಕಳು ಸೆಖೆಯಿಂದ ಬಳಲುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹವಾನಿಯಂತ್ರಣ (ಎಸಿ) ಸೌಲಭ್ಯ ಅಳಡಿಸುವ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಂದಾಗಿದೆ.
ರಾಜ್ಯದಲ್ಲಿಯೇ ಪ್ರಥಮವಾಗಿ ದ.ಕ. ಜಿಲ್ಲೆಯಲ್ಲಿ ಈ ಪ್ರಯೋಗ ಅನುಷ್ಠಾನಗೊಳ್ಳಲಿದ್ದು, ಪ್ರಥಮ ಹಂತವಾಗಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 10 ಅಂಗನವಾಡಿ ಕೇಂದ್ರಗಳಲ್ಲಿ ಎಸಿ ಅಳವಡಿಸಲು ನಿರ್ಧರಿಸಲಾಗಿದೆ. ಮಂಗಳೂರಿನ ಎಕ್ಕಾರು ಗ್ರಾಪಂನ ಕೆಂಜಗುಡ್ಡೆ ಹಾಗೂ ಬಂಟ್ವಾಳ ತಾಲೂಕಿನ ಶಂಭೂರು ಶಾಲೆಗಳಿಗೆ ಈಗಾಗಲೇ ಎಸಿ ಅಳವಡಿಕೆ ಕಾರ್ಯವಾಗಿದೆ. ದ.ಕ. ಜಿಪಂ ಸಿಇಒ ಡಾ.ಎಂ.ಆರ್.ರವಿಯವರ ಪರಿಕಲ್ಪನೆ ಇದಾಗಿದ್ದು, ಇದಕ್ಕಾಗಿ ಖಾಸಗಿ ಸಂಸ್ಥೆಗಳ ನೆರವು ಪಡೆಯಲು ಅವರು ಮುಂದಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ 2,104 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ 20 ಮಿನಿ ಅಂಗನವಾಡಿಗಳು, 1,494 ಸ್ವಂತ ಕಟ್ಟಡ ಇರುವ ಅಂಗನವಾಡಿಗಳಾಗಿವೆ. ಅಂಗನವಾಡಿಗಳಿಗೆ ಎಸಿ ಅಳವಡಿಸುವ ಮೂಲಕ ಹೈಟೆಕ್ ಸ್ಪರ್ಶ ನೀಡುವ ಉದ್ದೇಶವನ್ನೂ ಹೊಂದಿದ್ದು, ದ.ಕ. ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಒಂದೊಂದು ಅಂಗನವಾಡಿಯನ್ನು ಆಯ್ಕೆ ಮಾಡಿ ಅದನ್ನು ಮಾದರಿಯಾಗಿ ರೂಪಿಸಲು ಯೋಜನೆ ತಯಾರಾಗಿದೆ. ಇದಕ್ಕಾಗಿ ತಲಾ 30 ಲಕ್ಷ ರೂ. ವೆಚ್ಚದಲ್ಲಿ 2.4 ಕೋಟಿ ರೂ. ಮೊತ್ತದ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅದನ್ನು ಸಿಎಸ್‌ಆರ್ ನಿಧಿಯಿಂದ ಭರಿಸುವಂತೆ ಎಂಆರ್‌ಪಿಎಲ್‌ಗೆ ಕೋರಿಕೆಯನ್ನೂ ಸಲ್ಲಿಸಲಾಗಿದೆ.
ಮಾದರಿ ಅಂಗನವಾಡಿ ಕೇಂದ್ರಗಳನ್ನು ಹಂಚಿನ ಮೇಲ್ಛಾವಣಿಯೊಂದಿಗೆ ನಿರ್ಮಾಣ ಮಾಡಲಾಗುವುದು. ಮಕ್ಕಳಿಗೆ ಆಟವಾಡಲು ಅಗತ್ಯವಾದ ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಸಣ್ಣ ಉದ್ಯಾನವರ, ಗೊಂಬೆಗಳು, ಚಿತ್ರಗಳು ಕೂಡಾ ಈ ಮಾದರಿ ಅಂಗನವಾಡಿ ಕೇಂದ್ರಗಳು ಹೊಂದಲಿವೆ. ಬಡ ಮಕ್ಕಳಿಗೂ ಉತ್ತಮ ಸೌಲಭ್ಯಗಳನ್ನು ಒದಗಿಸಬೇಕೆಂಬ ಆಶಯದೊಂದಿಗೆ ಹಾಗೂ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರನ್ನು ಪ್ರೋತ್ಸಾಹಿಸುವ ಅಂಶವೂ ಈ ಯೋಜನೆಯದ್ದಾಗಿದೆ. ಎಸಿ ಅಳವಡಿಕೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸ್ವಂತ ಆರ್‌ಸಿಸಿ ಕಟ್ಟಡ ಮತ್ತು 15ಕ್ಕಿಂತ ಅಧಿಕ ಮಕ್ಕಳು ಇರುವ ಹಾಗೂ ಕಾಂಪೌಂಡ್ ಹೊಂದಿರುವ ಅಂಗನವಾಡಿಗಳಿಗೆ ಆದ್ಯತೆ ನೀಡಲಾಗಿದೆ.
ಮಂಗಳೂರು ತಾಲೂಕಿನ ಕಟೀಲಿನ ಕೆಂಚಗುಡ್ಡೆ, ಸೋಮೇಶ್ವರದ ಕುಂಪಲ, ಬಜ್ಪೆ ಗ್ರಾಪಂನ ಶಾಂತಿಗುಡ್ಡೆ, ಮಂಗಳೂರು ನಗರದ ಕದ್ರಿ ಶಾಲೆ, ಪದವು ಶಕ್ತಿನಗರ, ಬೋಳೂರು, ಬೋಳಾರ, ಉಳ್ಳಾಲ ನಗರಸಭೆಯ ಕೆರೆಬೈಲು, ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಪಂನ ಶಂಭೂರು ಶಾಲೆಯ ಅಂಗನವಾಡಿ, ಬಂಟ್ವಾಳ ಪುರಸಭೆಯ ಗೋಳಿನೆಲೆ ಅಂಗನವಾಡಿಗಳಿಗೆ ಪ್ರಥಮ ಹಂತದಲ್ಲಿ ಎಸಿ ಅಳವಡಿಸಲಾಗುತ್ತಿದೆ.