ಮಹನೀಯರ ಸಾಧನೆಗಳು ಮಾದರಿಯಾಗಲಿ: ಮೇಯರ್ ಕವಿತಾ ಸನಿಲ್
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ
ಮಂಗಳೂರು, ಮೇ 10: ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು ಮಾಡಿದ ಸಾಧನೆಗಳಿಂದಾಗಿ ನಾವಿಂದು ಅವರನ್ನು ನೆನಪಿಸಿಕೊಳ್ಳುವಂತಾಗಿದೆ. ಹಾಗಾಗಿ ಮಹನೀಯರ ಸಾಧನೆಗಳು ನಮಗೆ ಮಾದರಿಯಾಗಬೇಕು ಎಂದು ಮೇಯರ್ ಕವಿತಾ ಸನಿಲ್ ಅಭಿಪ್ರಾಯಿಸಿದ್ದಾರೆ.
ನಗರದ ಸರಕಾರಿ ಶಿಕ್ಷಣ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣ ದಲ್ಲಿ ಆಯೋಜಿಸಲಾದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಕಾಲೇಜಿನ ದೈಹಿಕ ಶಿಕ್ಷಕ ಪರಿವೀಕ್ಷಕ ಗುರು ಬಾಗೇವಾಡಿ, ಶಿವರಾಮಯ್ಯ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಸ್ವಾಗತಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಹಾಗೂ ನಂತರ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಚನ, ಕೀರ್ತನೆಗಳನ್ನು ಹಾಡಿದರು. ‘ಆದರ್ಶವನ್ನು ಬೋಧಿಸದೆ ಬದುಕಿನಲ್ಲಿ ಅಳವಡಿಸಿ ತೋರಿಸಿದಾಕೆ’
ಶ್ರೀಶೈಲದ ರಾಮಪುರದಲ್ಲಿ ಜನಿಸಿ, ಸಿದ್ಧಾಪುರದ ಭರಮರೆಡ್ಡಿಯನ್ನು ವಿವಾಹವಾಗಿ ಶಿವಶರಣೆಯಾಗಿದ್ದುಕೊಂಡು, ಕೌಟುಂಬಿಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ಹೆಣ್ಣಿನ ಆತ್ಮಬಲ, ಆತ್ಮಶಕ್ತಿಗೆ ನಿದರ್ಶನವಾದವರು ಹೇಮರೆಡ್ಡಿ ಮಲ್ಲಮ್ಮ.
ತನಗೆದುರಾದ ಸಂಕಷ್ಟಗಳಿಂದ ವೈರಾಗ್ಯ ತಾಳದೆ, ಕುಟುಂಬದವರಿಗೆ ಮನೋವೈದ್ಯೆಯಾಗಿ, ಮನಪರಿವರ್ತಕಿಯಾಗಿಯೂ ಕೆಲಸ ನಿರ್ವಹಿಸಿದ ಮಲ್ಲಮ್ಮನ ಬದುಕು ಪ್ರಸ್ತುತ ಕಾಲಮಾನಕ್ಕೆ ಪ್ರೇರಣೆಯಾಗಿದೆ.
- ಡಾ.ಸುಲತಾ ವಿದ್ಯಾಧರ್, ಉಪನ್ಯಾಸಕಿ, ಆಳ್ವಾಸ್ ಕಾಲೇಜು