ಒಡಿಶಾದ ಝೂನಲ್ಲೂ ಶುರುವಾಯ್ತು “ಬಾಹುಬಲಿ” ಹವಾ!

ಸಾಂದರ್ಭಿಕ ಚಿತ್ರ
ಭುವನೇಶ್ವರ್, ಮೇ 11: ಬಿಡುಗಡೆಯಾದ ನಂತರ ಸುಮಾರು 1,000 ಕೋಟಿ ರೂ. ಗಳಿಸಿ ಭಾರತೀಯ ಚಿತ್ರರಂಗದಲ್ಲೇ ವಿನೂತನ ದಾಖಲೆ ಗಳಿಸಿದ ಎಸ್.ಎಸ್. ರಾಜಮೌಳಿ ನಿರ್ದೇಶನದ “ಬಾಹುಬಲಿ” ಚಿತ್ರ ಸದ್ಯಕ್ಕಿರುವ “ಟ್ರೆಂಡಿಂಗ್” ವಿಷಯ. ಈ ಚಿತ್ರ ಹಲವಾರು ಜಾಹೀರಾತು ಪ್ರಚಾರಗಳಿಗೆ ಪ್ರೇರಣೆಯಾಗಿದ್ದಲ್ಲದೆ, ಹಲವು ಕುತೂಹಲಕಾರಿ ವಿಚಾರಗಳಿಗೂ ಸಾಕ್ಷಿಯಾಗಿದೆ. ಇಂತಹದ್ದೇ ಒಂದು ಪ್ರಕರಣ ಒಡಿಶಾದಲ್ಲೂ ನಡೆದಿದ್ದು, ಇಲ್ಲಿನ ಪ್ರಸಿದ್ಧ ನಂದನ್ ಕಣನ್ ಮೃಗಾಲಯದಲ್ಲೂ “ಬಾಹುಬಲಿ” ಇದ್ದಾನೆ. ಅಂದರೆ, ಇಲ್ಲಿನ ಹುಲಿ ಮರಿಯೊಂದಕ್ಕೆ “ಬಾಹುಬಲಿ” ಎಂದು ನಾಮಕರಣ ಮಾಡಲಾಗಿದೆ.
ಬುಧವಾರವಷ್ಟೇ ಹುಟ್ಟಿದ ಹುಲಿಮರಿಯೊಂದಕ್ಕೆ “ಬಾಹುಬಲಿ” ಎಂದು ನಾಮಕರಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡುವ ಬಹುತೇಕರು ಇದೇ ಹೆಸರನ್ನು ಸೂಚಿಸಿದ್ದರು ಎನ್ನಲಾಗಿದೆ. ಮೇಘಾ ಎಂಬ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಇದರಲ್ಲಿ ಒಂದಕ್ಕೆ “ಬಾಹುಬಲಿ” ಎಂದು ಹೆಸರಿಡಲಾಗಿದೆ.
ಸದ್ಯಕ್ಕಿರುವ "ಬಾಹುಬಲಿ" ಚಿತ್ರದಂತೆಯೇ ಒಡಿಶಾ ಮೃಗಾಲಯದ ಪುಟ್ಟ "ಬಾಹುಬಲಿ" ಕೂಡ ಸದ್ಯದ ಟ್ರೆಂಡಿಂಗ್ ವಿಚಾರವೇ ಆಗಿದೆ.