ಮುಸ್ಲಿಮರ ಪೌರತ್ವ ರದ್ದುಪಡಿಸುವುದನ್ನು ಅಸ್ಸಾಂನ ಬಿಜೆಪಿ ಸರಕಾರ ನಿಲ್ಲಿಸಬೇಕು: ಮೌಲಾನಾ ಅರ್ಶದ್ ಮದನಿ

ಹೊಸದಿಲ್ಲಿ,ಮೇ 11: ಅಸ್ಸಾಮಿನಲ್ಲಿ ಲಕ್ಷಾಂತರ ಮುಸ್ಲಿಮರ ನಾಗರಿಕತ್ವವನ್ನು ರದ್ದುಪಡಿಸುವ ಕ್ರಮದಿಂದ ರಾಜ್ಯದ ಬಿಜೆಪಿಸರಕಾರ ಹಿಂದೆ ಸರಿಯಬೇಕೆಂದು ಜಂಇಯ್ಯತುಲ್ ಉಲಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಅಸ್ಸಾಂ ಹೈಕೋರ್ಟು ತೀರ್ಪನ್ನು ತೋರಿಸಿ ಅಸ್ಸಾಮಿನಲ್ಲಿ ಹುಟ್ಟಿದವರನ್ನು ಹೊರಗಟ್ಟುವ ಕ್ರಮವನ್ನು ಅಲ್ಲಿನ ಬಿಜೆಪಿಸರಕಾರ ಕೈಗೊಳ್ಳಲು ಹೊರಟಿದೆ. ಇದನ್ನು ಸಮ್ಮತಿಸಲು ಸಾಧ್ಯವಿಲ್ಲ. ಅಸ್ಸಾಂನ ಒಪ್ಪಂದ ಪ್ರಕಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಮದನಿ ಹೇಳಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹೆಚ್ಚು ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮುತ್ತಲಾಕ್ ವಿಷಯದಲ್ಲಿ ಮೋದಿ ಸರಕಾರದೊಂದಿಗೆ ಜಂಇಯ್ಯತುಲ್ ಉಲಮಾ ಎ ಹಿಂದ್ ಸಂಘಟನೆಯ ಮಹ್ಮೂದ್ ಮದನಿ ವಿಭಾಗಕ್ಕೆ ಸಹಮತ ಇದೆ ಎನ್ನುವ ವಿಷಯವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಹೇಳಿದರು. ಜಂಇಯ್ಯತುಲ್ ಉಲಮಾದ ಒಂದು ವಿಭಾಗ ಕಳೆದ ದಿನ ಮೋದಿಯನ್ನು ಭೇಟಿಯಾಗಿ ಚರ್ಚಿಸಿತ್ತು.