ಶೌಚಾಲಯಗಳ ‘ಕಳವು’:ಮಹಿಳೆಯರ ದೂರು

ಬಿಲಾಸ್‌ಪುರ(ಛತ್ತೀಸ್‌ಗಡ),ಮೇ 11: ಇದನ್ನು ಕೇಳಿ ಅಚ್ಚರಿಯಾಗಬಹುದು. ಜಿಲ್ಲೆಯ ಅಮರಪುರ ಗ್ರಾಮದ ಓರ್ವ ವೃದ್ಧೆ ಮತ್ತು ಆಕೆಯ ಪುತ್ರಿ ತಮ್ಮ ಮನೆಯಿಂದ ‘ಶೌಚಾಲಯಗಳ ಕಳ್ಳತನ ’ವಾಗಿರುವ ಬಗ್ಗೆ ಪೊಲೀಸ್ ದೂರನ್ನು ದಾಖಲಿಸಿದ್ದಾರೆ. ಈ ಶೌಚಾಲಯಗಳು ಕೇವಲ ಕಾಗದದ ಮೇಲೆ ಅಸ್ತಿತ್ವದಲ್ಲಿವೆ ಎನ್ನುವುದನ್ನು ಆರ್‌ಟಿಐ ಕಾರ್ಯಕರ್ತರೋರ್ವರು ಬಯಲಿಗೆಳೆದಿದ್ದಾರೆ.
ಸ್ವಚ್ಛ ಭಾರತ ಅಭಿಯಾನದಡಿ ತಮ್ಮ ಮನೆಯಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಅದಕ್ಕಾಗಿ ಹಣವನ್ನೂ ಬಿಡುಗಡೆ ಮಾಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಿರುವುದು ಬೆಳಕಿಗೆ ಬಂದ ನಂತರ ಬೇಲಾಬಾಯಿ ಪಟೇಲ್(70) ಮತ್ತು ಆಕೆಯ ಪುತ್ರಿ ಚಂದ್ರಾ(45) ಕಳೆದ ವಾರ ತಮ್ಮ ಶೌಚಾಲಯಗಳು ಕಳ್ಳತನವಾಗಿರುವ ಬಗ್ಗೆ ಪೆಂಡ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮ್ಮ ಶೌಚಾಲಯಗಳನ್ನು ಪತ್ತೆ ಹಚ್ಚುವಂತೆ ಮತ್ತು ಈ ‘ಕಳ್ಳತನ ’ದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.
ಬೇಲಾ ಮತ್ತು ಚಂದ್ರಾ ವಿಧವೆಯರಾಗಿದ್ದು, ಬಿಪಿಎಲ್ ವರ್ಗಕ್ಕೆ ಸೇರಿರುವ ಇವರು ತಮ್ಮ ಮನೆಯ ಬೇರೆ ಬೇರೆ ಭಾಗಗಳಲ್ಲಿ ವಾಸವಿದ್ದಾರೆ. ತಮ್ಮ ಮನೆಯಲ್ಲಿ ಎರಡು ಶೌಚಾಲಯಗಳ ನಿರ್ಮಾಣ ಕೋರಿ ಅವರು 2015-16ರಲ್ಲಿ ಗ್ರಾಮ ಪಂಚಾಯತ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು.
ಗ್ರಾಮದ ಎಲ್ಲ ಫಲಾನುಭವಿಗಳ ಅರ್ಜಿಗಳನ್ನು ಪೆಂಡ್ರಾದಲ್ಲಿಯ ಜನಪದ ಪಂಚಾಯತ್‌ಗೆ ಕಳುಹಿಸಲಾಗಿದ್ದು, ಅಲ್ಲಿ ಅವುಗಳಿಗೆ ಮಂಜೂರಾತಿ ದೊರಕಿತ್ತು.
ಮಂಜೂರಾತಿ ದೊರಕಿ ಒಂದು ವರ್ಷವಾದರೂ ಶೌಚಾಲಯಗಳ ನಿರ್ಮಾಣ ಕಾಮಗಾರಿ ಆರಂಭಗೊಳ್ಳದ್ದರಿಂದ ಬೇಲಾ ಮತ್ತು ಚಂದ್ರಾ ಕಳೆದ ತಿಂಗಳು ಜನಪದ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿದಾಗ ಈಗಾಗಲೇ ತಮ್ಮ ಮನೆಯಲ್ಲಿ ‘ಶೌಚಾಲಯಗಳನ್ನು ನಿರ್ಮಿಸಲಾಗಿದೆ ’ಎಂಬ ಮಾಹಿತಿ ಅವರಿಗೆ ದೊರಕಿತ್ತು.
ತನ್ಮಧ್ಯೆ ಸ್ಥಳೀಯ ಆರ್‌ಟಿಐ ಕಾರ್ಯಕರ್ತ ಸುರೇಂದ್ರ ಪಟೇಲ್ ಅವರು ಈ ವಿಷಯದ ಬೆನ್ನು ಹತ್ತಿದಾಗ ಗ್ರಾಮದಲ್ಲಿಯ ಎಲ್ಲ ಫಲಾನುಭವಿಗಳ ಮನೆಯಲ್ಲಿ ಶೌಚಾಲಯಗಳು ನಿರ್ಮಾಣಗೊಂಡಿವೆ ಮತ್ತು ಅದಕ್ಕಾಗಿ ಹಣಕಾಸೂ ಬಿಡುಗಡೆ ಯಾಗಿದೆ ಎಂಬ ಉತ್ತರ ದೊರಕಿತ್ತು. ಆದರೆ ಈ ಪೈಕಿ ಹಲವಾರು ಶೌಚಾಲಯಗಳು ಕಾಗದದ ಮೇಲೆ ಮಾತ್ರ ನಿರ್ಮಾಣಗೊಂಡಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ತನಗೆ ಮಾಹಿತಿ ಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಪೆಂಡ್ರಾ ಜನಪದ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಧ್ರುವ ತಿಳಿಸಿದ್ದಾರೆ.







