ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬಸವ ಚಿಂತನೆಯಲ್ಲಿದೆ: ಚಟ್ನಳ್ಳಿ ಮಹೇಶ್

ಚಿಕ್ಕಮಗಳೂರು, ಮೇ11: ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಬಸವಚಿಂತನೆಯಲ್ಲಿದೆ. ಸರ್ವಸ್ಪರ್ಶಿ ಜನ ಶಿಕ್ಷಣ ನೀಡಿರುವುದು ವಚನಪರಂಪರೆ ಎಂದು ಸಾಹಿತಿ ಚಟ್ನಳ್ಳಿಮಹೇಶ್ ನುಡಿದರು.
ಅವರು ಲಕ್ಯಾ ಗ್ರಾಮದ ವೀರಶೈವ ಸಮಾಜ ನೇತೃತ್ವದಲ್ಲಿ ಶ್ರೀ ಗೌರಮ್ಮನವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಶ್ವಗುರು ಶ್ರೀಬಸವೇಶ್ವರರ 884ನೆಯ ಜಯಂತಿ ಮಹೋತ್ಸವದ ಪ್ರಧಾನ ಉಪನ್ಯಾಸಕರಾಗಿ ಮಾತನಾಡಿದರು.
ಸಮಾಜಕ್ಕಾಗಿ ಬದುಕಿದವರ ಹುಟ್ಟುಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯ ನಮ್ಮದು. ಎಲ್ಲರನ್ನೂ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪ್ರಜ್ಞೆ ನಮ್ಮಲ್ಲಿ ಮೂಡಿದರೆ ಬಸವ ಜಯಂತಿ ಆಚರಣೆ ಸಾರ್ಥಕವಾಗುತ್ತದೆ. ಲೇಸಾ ಬದುಕಿಗೆ ಬಸವಚಿಂತನೆ ಪ್ರೇರಕ. ಖಚಿತದರ್ಶನ ನೀಡಿರುವ ವಚನಗಳು ಬಾಳಿನ ರೀತಿ ಗ್ರಹಿಕೆಯ ನೀತಿಯನ್ನು ಮುಂದಿ ಜನಾಂಗಕ್ಕೆ ನೀಡುತ್ತಿವೆ ಎಂದರು. ಶಾಸಕ ಸಿ.ಟಿ.ರವಿ ಮಾತನಾಡಿ, ಕಾಯಕವನ್ನೆ ಕೈಲಾಸವೆಂದವರು ಬಸವಣ್ಣನವರು. ಪರಿಶ್ರಮದ ಜೀವನದಲ್ಲಿ ಕೈಲಾಸವನ್ನು ಕಂಡವರು. ನಮ್ಮ ಪುರಾತನ ಸಮಾಜ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ವೃತ್ತಿ ಇತ್ತು. ಆದರೆ ಬರುಬರುತ್ತಾ ವೃತ್ತಿಯಲ್ಲಿ ಮೇಲುಕೀಳೆಂಬ ದೃಷ್ಟಿಬಿದ್ದ ನಂತರ ವ್ಯತ್ಯಾಸವಾಯಿತು. ವುೂಲವೃತ್ತಿಯ ಬಗ್ಗೆ ಗೌರವ ಅಗತ್ಯ. ದೂರದಬೆಟ್ಟ ನುಣ್ಣಗೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾವುದೇ ವೃತ್ತಿ ಕೀಳಲ್ಲವೆಂಬ ಭಾವನೆ ನಮ್ಮದಾಗಬೇಕೆಂದರು.
ಬಸವಮಂದಿರದ ಶ್ರೀ ಜಯ ಬಸವಾನಂದ ಸ್ವಾಮೀಜಿ ಮಾತನಾಡಿ, ಭರತಖಂಡ ಸಾಧು-ಸಂತರ-ಮಹಂತರ ಬೀಡು. ಎಲ್ಲರನ್ನು ಜಯಂತಿಯಂದು ಸ್ಮರಿಸುವುದಾದರೆ ವರ್ಷದ 365ದಿನವೂ ಸಾಲದು. ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಹಾದಿ ನಿರ್ಮಿಸಬೇಕಾಗಿದೆ. ಮಹತ್ವರ ನೆನಪಿನಲ್ಲಿ ಒಂದುಗಂಟೆ ಹೆಚ್ಚು ಕಾಯಕ ಮಾಡಿದರೆ ಬಸವಜಯಂತಿ ಅರ್ಥಪೂರ್ಣವಾಗುತ್ತದೆ. ಮಹಾತ್ಮಾರನ್ನು ಜಾತಿಪಂಗಡಕ್ಕೆ ಕಟ್ಟಿಹಾಕದೆ ಬೇಲಿಹಾಕದೆ ವಿಶಾಲಸಮಾಜದ ನೆಲೆಯಲ್ಲಿ ಪರಿಭಾವಿಸಬೇಕೆಂದರು.
ಮಾಜಿ ಎಂಲ್‌ಸಿ ಗಾಯತ್ರಿಶಾಂತೇಗೌಡ ಸಮಾರಂಭ ಉದ್ಘಾಟಿಸಿದರು. ರಾಷ್ಟ್ರೀಯ ಬಸವದಳ ಮುಖಂಡರಾದ ಸಾಹಿತಿ ಬಾಣೂರುಚನ್ನಪ್ಪ ಬಸವಚಿಂತೆಗಳ ಬಗ್ಗೆ ಉಪನ್ಯಾಸ ನೀಡಿದರು. ಜಿಪಂ ಸದಸ್ಯ ಬೆಳವಾಡಿರವೀಂದ್ರ, ಕೌಟುಂಬಿಕ ಸಲಹೆಗಾರ ಜಯಚನ್ನೇಗೌಡ, ಜಿಪಂ ಮಾಜಿಸದಸ್ಯ ಡಿ.ಎಚ್.ಮರಿಗೌಡ, ವರ್ತಕ ರಾಜಣ್ಣ ಮಾತನಾಡಿದರು. ಶ್ರೀಬಸವೇಶ್ವರರ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಿತು. ನಗರಸಭಾ ಮಾಜಿ ಅಧ್ಯಕ್ಷ ಎಲ್.ವಿ.ಬಸವರಾಜು ಅಧ್ಯಕ್ಷತೆವಹಿಸಿದ್ದರು.
ಲಕ್ಯಾ ಗ್ರಾ.ಪಂ.ಅಧ್ಯಕ್ಷ ಜಯಣ್ಣೇಗೌಡ, ಉಪಾಧ್ಯಕ್ಷ ಧನಂಜಯಮೂರ್ತಿ, ವಿ.ಎಸ್.ಎಸ್.ಎನ್.ಅಧ್ಯಕ್ಷ ಕೃಷ್ಣಮೂರ್ತಿ, ಹಾಲುಸೊಸೈಟಿ ಅಧ್ಯಕ್ಷ ನಾಗೇಶ, ಪತ್ರಕರ್ತ ಪ್ರಭುಲಿಂಗಶಾಸ್ತ್ರಿ, ಗ್ರಾಮದ ಮುಖಂಡರಾದ ಎಲ್.ಎನ್.ಸತೀಶ್, ರವಿಕುಮಾರ, ಟಿ.ಪಿ.ಎಸ್.ಮಾಜಿ ಉಪಾಧ್ಯಕ್ಷ ಎಲ್.ಟಿ.ರಂಗಪ್ಪ, ಉಪವೀರಸಮಾಜದ ಮುಖಂಡ ಬೇಟೆರಂಗಪ್ಪ, ವಿಶ್ವಕರ್ಮಸಮಾಜದ ಶ್ಯಾಮಾಚಾರ್, ಗಂಗಾಮತಸ್ಥ ಸಮಾಜದ ಎಲ್.ಆರ್.ರಂಗಪ್ಪ, ಕುರುಬಸಮಾಜದ ಮುಖಂಡ ಗಂಗಾಧರಪ್ಪ, ಪರಿಶಿಷ್ಟಸಮಾಜದ ಮುಖಂಡ ಮಾಯಗಯ್ಯ, ಕ್ಯಾತನಬೀಡು ಚನ್ನಗೌಡ, ಗಾರೇಗೌಡ, ರುದ್ರಪ್ಪ, ದಕ್ಷಣಮೂರ್ತಿ ಮತ್ತಿತರರಿದ್ದರು.







