ತಾಯಿಯೇ ನನಗೆ ರೋಲ್ ಮಾಡೆಲ್: ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಸೃಜನಾ ಅನಿಸಿಕೆ

ಮಂಗಳೂರು, ಮೇ 11: "ನನ್ನ ತಾಯಿಯೇ ನನಗೆ ರೋಲ್ ಮಾಡೆಲ್. ನನ್ನ ತಾಯಿ ಪ್ರಸ್ತುತ ಬೆಂಗಳೂರಿನ ನಿಟ್ಟೆ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಂಪ್ಯೂಟರ್ ಸಾಯನ್ಸ್ ವಿಭಾಗದ ಫ್ರೊಫೆಸರ್ ಆಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸಾಯನ್ಸ್‌ನಲ್ಲಿ ಇಂಜಿನಿಯರ್ ಕ್ಷೇತ್ರವನ್ನು ಆಯ್ದುಕೊಳ್ಳಬೇಕೆಂದಿದ್ದೇನೆ" ಎಂದು ಪಿಯುಸಿಯ ವಿಜ್ಞಾನ ವಿಭಾಗ(ಪಿಸಿಎಂಸಿ)ದಲ್ಲಿ 596 ಅಂಕಗಳನ್ನು ಪಡೆದಿರುವ ಸೃಜನಾ ‘ವಾರ್ತಾಭಾರತಿ’ಯೊಂದಿಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೃಜನಾ ಎನ್. ಒಟ್ಟು 600 ಅಂಕಗಳಲ್ಲಿ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ವಿಜ್ಞಾನ ಮತ್ತು ಕಂಪ್ಯೂಟರ್ ಸಾಯನ್ಸ್‌ನಲ್ಲಿ ತಲಾ 100 ಅಂಕಗಳು ಹಾಗೂ ಇಂಗ್ಲಿಷ್‌ನಲ್ಲಿ 97 ಮತ್ತು ಹಿಂದಿಯಲ್ಲಿ 99 ಅಂಕಗಳನ್ನು ಸೃಜನಾ ಪಡೆದುಕೊಂಡಿದ್ದಾರೆ. ಮೂಲತ: ತುಮಕೂರಿನ ಕುವೆಂಪು ನಗರದ ನಿವಾಸಿ, ಉದ್ಯಮಿ ನಿರಂಜನ್ ಪಿ. ಹಾಗೂ ಬೆಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಡಾ. ನಳಿನಿ ಎನ್. ದಂಪತಿಯ ಪುತ್ರಿ ಸೃಜನಾ.
ಸೃಜನಾ ನಿಟ್ಟೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ 10ನೆ ತರಗತಿಯಲ್ಲಿ ಸಿಜಿಪಿಎ 10 ಅಂಕಗಳನ್ನು ಪಡೆದಿದ್ದರು.
‘‘2 ವರ್ಷ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದುಕೊಂಡೇ ನಾನು ದ್ವಿತೀಯ ಪಿಯುಸಿ ಮುಗಿಸಿದ್ದೇನೆ. ಉತ್ತಮ ಕೋಚಿಂಗ್ ಸಿಕ್ಕಿದ್ದರಿಂದಲೇ ನಾನು ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೆ. ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದೆ. ಆದರೆ 596 ಅಂಕಗಳನ್ನು ಗಳಿಸುವುದಾಗಿ ಭಾವಿಸಿರಲಿಲ್ಲ. ಫಲಿತಾಂಶ ಖುಷಿ ಹಾಗೂ ಅಚ್ಚರಿ ಎರಡನ್ನೂ ನೀಡಿದೆ’’ ಎಂದು ಸೃಜನಾ ಹೇಳಿದ್ದಾರೆ.
‘‘ನಾನು ಉಪನ್ಯಾಸಕಿಯಾಗಿದ್ದುಕೊಂಡು ಪದೇ ಪದೇ ವರ್ಗಾವಣೆ ಪಡೆಯುತ್ತಿರುವುದರಿಂದ ಮಗಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿಗೆ ಸೇರಿಸಿದ್ದೆ. ಆಕೆ ಪಿಸಿಎಂಸಿಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವುದಾಗಿ ಹೇಳಿಕೊಂಡಿದ್ದಳು. ಹಾಗಿದ್ದರೂ ಆಕೆ ಪ್ರಸ್ತುತ ಪಡೆದಿರುವ ಅಂಕಗಳು ಖುಷಿ ತಂದಿದೆ’’ ಎಂದು ಸೃಜನಾ ಅವರ ತಾಯಿ ಡಾ. ನಳಿನಿ ಎನ್. ಪ್ರತಿಕ್ರಿಯಿಸಿದ್ದಾರೆ.







