ಮಂಗಳೂರಿನಲ್ಲಿ ಪೂರ್ಣಾವಧಿ ಪಾಸ್‌ಪೋರ್ಟ್ ಕೇಂದ್ರ ವಿಸ್ತರಣೆ: ಡಾ.ಆರತಿ ಕೃಷ್ಣ
ಕೊಲ್ಲಿ ರಾಷ್ಟ್ರಗಳಿಗೆ ತೆರಳುವ ಕಾರ್ಮಿಕರಿಗೆ ವಂಚನೆ: ಅನಧಿಕೃತ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮನವಿ

ಬೆಂಗಳೂರು, ಮೇ 11: ಕೊಲ್ಲಿ ಹಾಗೂ ಮಲೇಶಿಯಾ ರಾಷ್ಟ್ರಗಳಿಗೆ ಕಾರ್ಮಿಕರನ್ನು ಕರೆದೊಯ್ಯುವ ನೆಪದಲ್ಲಿ ವಂಚಿಸುತ್ತಿರುವ ಅನಧಿಕೃತ ನೇಮಕಾತಿ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಅರಸಿ ಕೊಲ್ಲಿ ಹಾಗೂ ಮಲೇಶಿಯಾ ರಾಷ್ಟ್ರಗಳಿಗೆ ತೆರಳುವ ಕಾರ್ಮಿಕರಿಗೆ ವಂಚನೆ ಮಾಡುವ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕರಾವಳಿ ಭಾಗದ ಜನತೆಗೆ ಅನುಕೂಲ ಆಗುವಂತೆ ಮಂಗಳೂರಿನಲ್ಲಿರುವ ತಾತ್ಕಾಲಿಕ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಪೂರ್ಣಾವಧಿಗೆ ವಿಸ್ತರಿಸಲು ಕೇಂದ್ರ ಸಚಿವರು ಒಪ್ಪಿಗೆ ನೀಡಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಭರವಸೆ ನೀಡಿದ್ದಾರೆ.
ಈ ಸಂಬಂಧ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಸಲ್ಲಿಸಿದ್ದು, ರಾಜ್ಯ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ ಭರವಸೆ ನೀಡಿದ್ದಾರೆ ಎಂದ ಅವರು, ವಿದೇಶಕ್ಕೆ ವಲಸೆ ಹೋಗುವ ಕಾರ್ಮಿಕರಿಗೆ ಯಾವುದೇ ರೀತಿಯ ವಂಚನೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇ-ಮೈಗ್ರೇಟ್ ಪ್ರಾಜೆಕ್ಟ್: ಕೊಲ್ಲಿ ರಾಷ್ಟ್ರಗಳಿಗೆ ತೆರಳಿರುವ ವಲಸಿಗರ ಸುರಕ್ಷತೆ ದೃಷ್ಟಿಯಿಂದ ಅವರಿಗೆ ಮಾಹಿತಿ ನೀಡಲು ಅನಿವಾಸಿ ಭಾರತೀಯ ಸಮಿತಿಯಿಂದ emigrate.gov.in ಎಂಬ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಐಚ್ಛಿಕ ಭಾಷೆ: ಕೊಲ್ಲಿ ರಾಷ್ಟ್ರಗಳಲ್ಲಿನ ಅನಿವಾಸಿ ಭಾರತೀಯರು ತಮ್ಮ ಮಕ್ಕಳು ತಮ್ಮ ಪಠ್ಯ ಕ್ರಮದಲ್ಲಿ ಕೇರಳ, ತೆಲುಗು ಮತ್ತು ತಮಿಳು ಮಾದರಿಯಲ್ಲಿ ಕನ್ನಡವನ್ನು ಐಚ್ಛಿಕ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಕೇಂದ್ರ ಸರಕಾರ ಸಮ್ಮತಿಸಿದೆ ಎಂದು ಅವರು ಹೇಳಿದರು.
ಕೊಲ್ಲಿ ರಾಷ್ಟ್ರಗಳಿಂದ ಹಿಂದಿರುಗುವ ಕಾರ್ಮಿಕರ ಕಾರ್ಯಕ್ಷಮತೆಗೆ ತಕ್ಕನಾದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಆರಂಭಿಸಲು ಕೇಂದ್ರ ಆರ್ಥಿಕ ನೆರವು ನೀಡಬೇಕು. ಕೊಲ್ಲಿ ರಾಷ್ಟ್ರಗಳಲ್ಲಿ ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ವೇತನ ತಾರತಮ್ಯ ಸರಿಪಡಿಸಬೇಕು. ಆ ದೇಶಗಳಲ್ಲಿ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಲಾಗಿದೆ ಎಂದರು.
ಕೇರಳ ಮಾದರಿಯಲ್ಲಿಯೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಬಳಕೆದಾರರ ಶುಲ್ಕವನ್ನು ಪಡೆಯುವುದನ್ನು ನಿಲ್ಲಿಸಬೇಕು. ವಿದೇಶಗಳಲ್ಲಿ ಕಾರ್ಮಿಕರು ಸಮಸ್ಯೆಗೆ ಸಿಲುಕಿ ಹಿಂದಿರುಗುವ ವೇಳೆ ಇರುವ ನಿರ್ಬಂಧಗಳನ್ನು ಸಡಿಲಿಸಬೇಕು ಹಾಗೂ ಆತ್ಮಹತ್ಯೆ, ಕೊಲೆ, ಇತರ ಸಂದರ್ಭಗಳಲ್ಲಿ ಮೃತದೇಹವನ್ನು ಶೀಘ್ರಗತಿಯಲ್ಲಿ ವಾಪಸು ತರಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಅಲ್ಲಿನ ಕಾರ್ಮಿಕರಿಗೆ ಉಚಿತ ಕಾನೂನು ನೆರವು, ಅನಿವಾಸಿ ಕನ್ನಡಿಗರು ಐಡಿಎಫ್ ಓವರ್‌ಸೀಸ್ ಇಂಡಿಯನ್ ಮುಖಾಂತರ ಹಲವು ಯೋಜನೆಗಳಿಗೆ ಬಂಡವಾಳ ಹೂಡಲು ಅನುಕೂಲವಾಗುವಂತೆ ನಮ್ಮ ಊರು ನಮ್ಮ ನಾಡು ಕಾರ್ಯಕ್ರಮದಲ್ಲಿ ಅವಕಾಶ ಮಾಡಿಕೊಡಬೇಕೆಂದು ವಿದೇಶಾಂಗ ಸಚಿವೆ ಅಧ್ಯಕ್ಷತೆಯಲ್ಲಿ ನಡೆದ ಕೊಲ್ಲಿ ರಾಷ್ಟ್ರಗಳ ಕಾರ್ಮಿಕರ ಸಮಸ್ಯೆಗಳ ಕುರಿತ ಸಭೆಯಲ್ಲಿ ಕೋರಲಾಗಿದೆ ಎಂದರು.







