ಟ್ಯೂಶನ್ ಇಲ್ಲದೇ ಶೇ. 99 ಅಂಕ!: ಬೊಂದೇಲ್‌ನ ವಿದ್ಯಾರ್ಥಿ ದರ್ಶನ್ ಸಾಧನೆ

ಮಂಗಳೂರು, ಮೇ 11: ಸಾಧಿಸುವ ಛಲವಿದ್ದರೆ ಹೆಚ್ಚುವರಿ ಟ್ಯೂಶನ್, ಕೋಚಿಂಗ್ ಇಲ್ಲದೆಯೂ ಅತ್ಯುತ್ತಮ ಅಂಕಗಳನ್ನು ಪಡೆಯಬಹುದು ಎಂಬುದನ್ನು ಪದವಿನಂಗಡಿ ನಿವಾಸಿ, ದ್ವಿತೀಯ ಪಿಯುಸಿಯ ದರ್ಶನ್ ಪಿ. ಸಾಧಿಸಿ ತೋರಿಸಿದ್ದಾರೆ.
ಸೈಂಟ್ ಅಲೋಶಿಯಸ್‌ನ ದ್ವಿತೀಯ ಪಿಯುಸಿಯ ವಿದ್ಯಾರ್ಥಿಯಾದ ದರ್ಶನ್ ವಾಣಿಜ್ಯ ವಿಭಾಗದಲ್ಲಿ ಶೇ. 99 (593) ಅಂಕಗಳನ್ನು ಪಡೆದಿದ್ದಾರೆ. ಮೂಲ ಗಣಿತ, ಸಂಖ್ಯಾಶಾಸ್ತ್ರ, ಅಂಕಗಣಿತ ಹಾಗೂ ಬಿಸ್ನೆಸ್ ಸ್ಟಡೀಸ್ ನಲ್ಲಿ ತಲಾ 100 ಅಂಕಗಳು ಹಾಗೂ ಆಂಗ್ಲ ಭಾಷೆಯಲ್ಲಿ 95, ಹಿಂದಿಯಲ್ಲಿ 98 ಅಂಕಗಳನ್ನು ದರ್ಶನ್ ಪಡೆದಿದ್ದಾರೆ.
ಸಿಎ ಆಗುವಾಸೆ: ‘‘ಮುಂದೆ ಚಾರ್ಟೆಡ್ ಅಕೌಂಟೆಟ್ ಆಗಬೇಕೆಂಬ ಆಸೆ ಇದೆ. ನನ್ನ ತಂದೆ-ತಾಯಿ ಹಾಗೂ ಶಿಕ್ಷಕರ ಬೆಂಬಲ ಹಾಗೂ ಆಶೀರ್ವಾದದಿಂದಲೇ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನಗಿಂತಲೂ ಹೆಚ್ಚಾಗಿ ತಂದೆಗೆ ನಾನು ಅತ್ಯುತ್ತಮ ಅಂಕಗಳನ್ನು ಪಡೆಯುವ ಬಗ್ಗೆ ವಿಶ್ವಾಸವಿತ್ತು’’ಎಂದು ದರ್ಶನ್ ಪಿ. ‘ವಾರ್ತಾಭಾರತಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
"ದಿನದಲ್ಲಿ ಕನಿಷ್ಠ 2 ಗಂಟೆ ಓದು, ಸಮಯ ಸಿಕ್ಕಾಗ ದಿನದಲ್ಲಿ ಗರಿಷ್ಠ ಮೂರರಿಂದ ನಾಲ್ಕು ಗಂಟೆಯವರೆಗೆ ಓದುತ್ತಿದ್ದೆ. ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಹೆಚ್ಚಾಗಿ ಓದಿಗೆ ಸಮಯ ಮೀಸಲಿಡುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುತ್ತಿದ್ದರು. ಹಾಗಾಗಿ ಟ್ಯೂಶನ್‌ಗೆ ಹೋಗುವ ಅಗತ್ಯ ಕಾಣಲಿಲ್ಲ. ವಾಮಂಜೂರಿನ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಅಣ್ಣನೂ ನನಗೆ ಪ್ರೋತ್ಸಾಹ ನೀಡುತ್ತಿದ್ದ. ಉಳಿದಂತೆ ನಾನು ಕಾಲೇಜಿನಲ್ಲಿ ಇತರ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದೆ. ಚರ್ಚಾ ಸ್ಪರ್ಧೆ, ಕ್ವಿಝ್ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದುಕೊಂಡಿದ್ದೇನೆ" ಎಂದು ದರ್ಶನ್ ಹೇಳುತ್ತಾರೆ.
ನಗರದ ಪದವಿನಂಗಡಿ ನಿವಾಸಿ ವೃತ್ತಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಸತೀಶ್ ಪಿ. ಮತ್ತು ಗೃಹಿಣಿ ದಯಾವತಿ ಅವರ ಪುತ್ರನಾಗಿರುವ ದರ್ಶನ್, ಬೊಂದೇಲ್‌ನ ಮಹಾತ್ಮ ಗಾಂಧಿ ಸೆಂಟಿನರಿ ಹೈಸ್ಕೂಲ್‌ನಲ್ಲಿ ಶೇ. 98 ಅಂಕಗಳೊಂದಿಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.







