ಟ್ರಂಪ್-ರಶ್ಯ ನಂಟಿನ ತನಿಖೆ ವಿಸ್ತರಿಸಲು ಎಫ್‌ಬಿಐ ಮುಖ್ಯಸ್ಥ ಬಯಸಿದ್ದರು?
ಕಾಂಗ್ರೆಸ್ ಮೂಲವೊಂದರಿಂದ ಬಹಿರಂಗ

ವಾಶಿಂಗ್ಟನ್, ಮೇ 11: ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ)ನ ನಿರ್ದೇಶಕ ಜೇಮ್ಸ್ ಕಾಮಿ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಜಾಗೊಳಿಸಿರುವುದಕ್ಕೆ ಸಂಬಂಧಿಸಿ ಹೊಸ ಮಾಹಿತಿಯೊಂದು ಹೊರಬಿದ್ದಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅವಧಿಯಲ್ಲಿ, ಟ್ರಂಪ್ ಚುನಾವಣಾ ತಂಡ ಮತ್ತು ರಶ್ಯ ಕೈಜೋಡಿಸಿದ್ದವು ಎಂಬ ಆರೋಪಗಳ ಕುರಿತ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸುವ ಬಯಕೆಯನ್ನು ಎಫ್‌ಬಿಐ ನಿರ್ದೇಶಕರಿ ವಜಾಗೊಳ್ಳುವ ಕೆಲವು ದಿನಗಳ ಮೊದಲು ವ್ಯಕ್ತಪಡಿಸಿದ್ದರು ಎಂದು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಮೂಲವೊಂದು ಬುಧವಾರ ತಿಳಿಸಿದೆ.
ಎಫ್‌ಬಿಐ ಮುಖ್ಯಸ್ಥರನ್ನು ವಜಾಗೊಳಿಸಿದ ವಿಚಾರದಲ್ಲಿ ಹಲವಾರು ಡೆಮಾಕ್ರಟಿಕ್ ಸಂಸದರು ಹಾಗೂ ಸ್ವತಃ ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಕೆಲವು ಸಂಸದರು ಅಧ್ಯಕ್ಷರನ್ನು ಟೀಕಿಸಿದ್ದಾರೆ.
ಆದರೆ, ಇದಕ್ಕೆ ತಿರುಗೇಟು ನೀಡಿರುವ ಟ್ರಂಪ್ ಆಡಳಿತ, ಜೇಮ್ಸ್ ತನ್ನ ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದೆ ಹಾಗೂ ಎಫ್‌ಬಿಐ ನಡೆಸುತ್ತಿರುವ ಟ್ರಂಪ್-ರಶ್ಯ ನಂಟಿನ ವಿಚಾರಣೆಗೂ ಎಫ್‌ಬಿಐ ಮುಖ್ಯಸ್ಥರ ವಜಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಜೇಮ್ಸ್‌ರನ್ನು ವಜಾ ಮಾಡಿರುವುದು ಎಫ್‌ಬಿಐಯ ವಿಚಾರಣೆಯನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಆರೋಪಿಸಿರುವ ಡೆಮಾಕ್ರಟ್ ಸದಸ್ಯರು, ಅಮೆರಿಕದ ಚುನಾವಣೆಯಲ್ಲಿ ರಶ್ಯ ನಡೆಸಿದ ಹಸ್ತಕ್ಷೇಪದ ಬಗ್ಗೆ ಸ್ವತಂತ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ರಶ್ಯದ ಜೊತೆಗೆ ಸೇರಿ ಮಾಡಿದ ತಪ್ಪನ್ನು ಮುಚ್ಚಿಹಾಕುವುದಕ್ಕಾಗಿ ಎಫ್‌ಬಿಐ ಮುಖ್ಯಸ್ಥರನ್ನು ಹೊರಗಟ್ಟಲಾಗಿದೆ ಎಂದು ಕೆಲವರು ಬಣ್ಣಿಸಿದ್ದಾರೆ.
ಅಮೆರಿಕದ ಅಧ್ಯಕ್ಷರು ಮಂಗಳವಾರ ದಿಢೀರನೆ ಎಫ್‌ಬಿಐ ಮುಖ್ಯಸ್ಥರನ್ನು ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.







