ಆಳ್ವಾಸ್ ಕಾಲೇಜಿನ ಸ್ಪಂದನಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ, ವಿಜ್ಞಾನ ವಿಭಾಗದಲ್ಲಿ ನಿಹಾರಿಕಾ ತೃತೀಯ

ಸ್ಪಂದನಾ ನಿಹಾರಿಕಾ
ಮೂಡುಬಿದಿರೆ, ಮೇ 11: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಸ್ಪಂದನಾ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ವಿಜ್ಞಾನ ವಿಭಾಗದ ನಿಹಾರಿಕ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಚಾರ್ಟೆಡ್ ಅಕೌಂಟೆಟ್ ಆಗುವಾಸೆ: ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿರುವ ಸ್ಪಂದನಾ ಚಾರ್ಟೆಡ್ ಅಕೌಂಟೆಟ್ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಬೇಕರಿ ಉದ್ಯಮಿ ವಿಜಯ ಕುಮಾರ್ ಹಾಗೂ ಗೃಹಿಣಿ ಭಾರತಿ ದಂಪತಿಯ ಪುತ್ರಿಯಾಗಿರುವ ಈಕೆ ಆಳ್ವಾಸ್ನಲ್ಲಿ ಉಚಿತ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣ ಪಡೆದಿದ್ದರು.
ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿರುವ ಸ್ಪಂದನಾ ಈ ಬಗ್ಗೆ ಪ್ರತಿಕ್ರಿಯಿಸಿ, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹಾಗೂ ಇಲ್ಲಿನ ಅಧ್ಯಾಪಕ ವೃಂದ ನೀಡಿದ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದಿದ್ದಾರೆ.
ನಿಹಾರಿಕಾಗೆ ವೈದ್ಯೆಯಾಗುವಾಸೆ: ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಮೂರನೇ ರ್ಯಾಂಕ್ ಗಳಿಸಿರುವ ನಿಹಾರಿಕಾ, ವೈದ್ಯೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಉಚಿತ ದತ್ತು ಸ್ವೀಕಾರ ಯೋಜನೆಯಡಿ ಶಿಕ್ಷಣ ಪಡೆದಿರುವ ನಿಹಾರಿಕಾ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಮಂಡ್ಯ ನಾಗಮಂಗಲದ ರಾಜೇಶ್ ಎಚ್. ಎಲ್. ಹಾಗೂ ಸವಿತಾ ಎಸ್. ವಿ. ದಂಪತಿಯ ಪುತ್ರಿ.
"ಎಸೆಸೆಲ್ಸಿಯಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದು, ಈ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ನಿರೀಕ್ಷಿಸಿದ್ದೆ. ಆದರೆ ನಿರೀಕ್ಷಿತ ಅಂಕ ಲಭಿಸಿಲ್ಲ. ಉಚಿತ ಶಿಕ್ಷಣ ನೀಡಿದ ಆಳ್ವಾಸ್ಗೆ ರ್ಯಾಂಕ್ ಮೂಲಕ ಕಾಣಿಕೆ ನೀಡಿದ್ದೇನೆ" ಎಂದು ನಿಹಾರಿಕಾ ಪ್ರತಿಕ್ರಿಯಿಸಿದ್ದಾರೆ.







