ತ್ರಿವಳಿ ತಲಾಕ್ ಇಸ್ಲಾಮ್‌ನ ಮೂಲಭೂತ ಪ್ರಕ್ರಿಯೆಯೇ ಎನ್ನುವುದರ ಪರಿಶೀಲನೆ : ಸುಪ್ರೀಂ
.jpg)
ಹೊಸದಿಲ್ಲಿ,ಮೇ 11: ಇಸ್ಲಾಮ್‌ನಲ್ಲಿ ಪ್ರಚಲಿತವಿರುವ ತ್ರಿವಳಿ ತಲಾಕ್ ವಿಚ್ಛೇದನ ಪದ್ಧತಿಯು ಧರ್ಮದ ಮೂಲಭೂತ ಪ್ರಕ್ರಿಯೆಯೇ ಮತ್ತು ಅದು ಜಾರಿಗೊಳಿಸ ಬಹುದಾದ ಮೂಲಭೂತ ಹಕ್ಕಿನ ಭಾಗವೇ ಎನ್ನುವುದನ್ನು ತಾನು ಪರಿಶೀಲಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.
ತ್ರಿವಳಿ ತಲಾಕ್‌ಗೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿಗಳನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಇಂದು ಆರಂಭಿಸಿತು.
ತ್ರಿವಳಿ ತಲಾಕ್ ಜೊತೆಗೆ ಬಹುಪತ್ನಿತ್ವ ಮತ್ತು ‘ನಿಕಾ ಹಲಾಲಾ ’ಕ್ಕೆ ಸಂಬಂಧಿಸಿದ ಅರ್ಜಿಗಳನ್ನೂ ನ್ಯಾಯಾಲಯವು ಆಲಿಸಲಿದೆ. ಆದರೆ ಮುಸ್ಲಿಮರಲ್ಲಿಯ ಬಹುಪತ್ನಿತ್ವ ಪದ್ಧತಿ ವಿವಾದವು ತನ್ನ ವಿಚಾರಣೆಯ ಭಾಗವಾಗದಿರಬಹುದು ಎಂದು ಅದು ತಿಳಿಸಿದೆ.
ತ್ರಿವಳಿ ತಲಾಕ್ ಪದ್ಧತಿಯನ್ನು ಬೆಂಬಲಿಸುತ್ತಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಅದು ಮದುವೆಯನ್ನು ಅಂತ್ಯಗೊಳಿಸಲು ಸಿಂಧುವಾಗಿರುವ ವಿಧಾನ ಎಂದು ವಾದಿಸುತ್ತಿದೆ. ಅಲ್ಲದೆ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಸರಕಾರ ಮತ್ತು ನ್ಯಾಯಾಲಯಗಳ ಹಸ್ತಕ್ಷೇಪವನ್ನು ಅದು ವಿರೋಧಿಸುತ್ತಿದೆ.