ದಂಗೆ ಪ್ರಕರಣದಲ್ಲಿ ಆದಿತ್ಯನಾಥ್ ವಿರುದ್ಧ ಕಾನೂನು ಕ್ರಮಕ್ಕೆ ನಕಾರ

ಅಲಹಾಬಾದ್,ಮೇ 11: 2007ರ ಗೋರಖಪುರ ಕೋಮುದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಕಾನೂನು ಕ್ರಮಕ್ಕೆ ತಾನು ಅನುಮತಿಯನ್ನು ನಿರಾಕರಿಸಿರುವುದಾಗಿ ಉತ್ತರ ಪ್ರದೇಶ ಸರಕಾರವು ಗುರುವಾರ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಬಗ್ಗೆ ಪ್ರಮಾಣಪತ್ರವನ್ನು ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು. ಗೋರಖಪುರ ದಂಗೆ ಸಂದರ್ಭ ಆದಿತ್ಯನಾಥ್ ಸ್ಥಳೀಯ ಸಂಸದರಾಗಿದ್ದರು.
ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಉಚ್ಚ ನ್ಯಾಯಾಲಯವು ಮೇ 7ರಂದು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶ ನೀಡಿತ್ತು. ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸಿಬಿ-ಸಿಐಡಿಯು ಪ್ರಕರಣವನ್ನು ಮುಕ್ತಾಯಗೊಳಿಸಲು ಉದ್ದೇಶಿಸಿದೆ ಮತ್ತು ಅದು ತನ್ನ ಮುಕ್ತಾಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ ಎಂದೂ ಭಟ್ನಾಗರ್ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ದೂರುದಾರರಾಗಿರುವ ಪರ್ವೇಝ್ ಪರ್ವಾಝ್ ಮತ್ತು ಸಾಕ್ಷಿ ಅಸದ್ ಹಯಾತ್ ಅವರು ಸ್ವತಂತ್ರ ಏಜನ್ಸಿಯಿಂದ ತನಿಖೆಯನ್ನು ಕೋರಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಪ್ರಕರಣದಲ್ಲಿ ಆಗಿನ ಮೇಯರ್ ಅಂಜು ಚೌಧರಿ ಮತ್ತು ಬಿಜೆಪಿ ಶಾಸಕ ರಾಧಾಮೋಹನ ದಾಸ್ ಅಗರವಾಲ್ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.





