ವಾಣಿಜ್ಯ ವಿಭಾಗದಲ್ಲಿ ಸಾಯಿ ಸಮರ್ಥ್ ರಾಜ್ಯಕ್ಕೆ ಪ್ರಥಮ
ಜಿಲ್ಲೆಗೆ ಕೀರ್ತಿ ತಂದ ಬಂಟ್ವಾಳದ ಅಳಿಕೆ ಸಾಯಿ ಲೋಕಾಸೇವಾ ಕಾಲೇಜಿನ ವಿದ್ಯಾರ್ಥಿ

ಬಂಟ್ವಾಳ, ಮೇ 11: ತಾಲೂಕಿನ ಅಳಿಕೆ ಶ್ರೀ ಸತ್ಯ ಸಾಯಿ ಲೋಕಾ ಸೇವಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಾಯಿ ಸಮರ್ಥ್ 595 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀಧರ್ ಪಾನಗಂಟಿ ಮತ್ತು ಲತಾ ಪಾನಗಂಟಿ ದಂಪತಿ ಪುತ್ರನಾಗಿರುವ ಸಾಯಿ ಸಮರ್ಥ್ ಬಂಟ್ವಾಳ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
600 ಅಂಕಗಳಲ್ಲಿ 595 ಅಂಕಗಳನ್ನು ಗಳಿಸಿರುವ ಸಾಯಿ ಸಮರ್ಥ್, ಗಣಿತದಲ್ಲಿ 100, ಸಂಖ್ಯಾ ಶಾಸ್ತ್ರದಲ್ಲಿ 100, ಸಂಸ್ಕೃತದಲ್ಲಿ 100, ಲೆಕ್ಕ ಶಾಸ್ತ್ರದಲ್ಲಿ 99, ವ್ಯವಹಾರ ಅಧ್ಯಾಯನದಲ್ಲಿ 98 ಹಾಗೂ ಇಂಗ್ಲಿಷ್‌ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.
"ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದ 5 ಟಾಪರ್‌ಗಳಲ್ಲಿ ತಾನೂ ಇರುತ್ತೇನೆ ಎಂಬ ವಿಶ್ವಾಸ ಆತನಿಗಿತ್ತು" ಎಂದು ತಂದೆ ಶ್ರೀಧರ್ ತಿಳಿಸಿದ್ದಾರೆ. ಯೋಗಾಭ್ಯಾಸ, ಕ್ರೀಡಾ ಚಟುವಟಿಕೆ ತನ್ನ ಸಾಧನೆಗೆ ಕಾರಣವಾಯಿತು ಎನ್ನುತ್ತಾನೆ ಸಮರ್ಥ್.
ಸಾಯಿ ಸಮರ್ಥ್‌ನ ತಂದೆ ಶ್ರೀಧರ್ ಪಾನಗಂಟಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ತಾಯಿ ಲತಾ ಗೃಹಿಣಿಯಾಗಿದ್ದಾರೆ. ಸಿಎ ಮಾಡುವ ಕನಸನ್ನು ಸಾಯಿ ಸಮರ್ಥ್ ಹೊಂದಿದ್ದು, ಇದಕ್ಕಾಗಿ ಪ್ರಥಮ ಪಿಯುಸಿಯಲ್ಲಿರುವಾಗಲೇ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಸಿಎ ಕೋಚಿಂಗ್ ಪಡೆಯುತ್ತಿದ್ದಾನೆ.
ಸಿಎ, ಎಂಬಿಎ ಮಾಡುವ ಕನಸು: ಈ ಬಗ್ಗೆ ಪ್ರತಿಕ್ರಿಯಿಸಿದ ಸಾಯಿ ಸಮರ್ಥ್, "ಬೆಳಗ್ಗೆ 5 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಓದುತ್ತಿದ್ದೆ. ಓದಿನೊಂದಿಗೆ ಯೋಗಾಸನ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೆ. ರಾಜ್ಯದ ಐದು ಟಾಪರ್‌ಗಳಲ್ಲಿ ನಾನೂ ಬರುತ್ತೇನೆ ಎಂಬ ವಿಶ್ವಾಸ ಇತ್ತು. ರಾಜ್ಯಕ್ಕೆ ಟಾಪರ್ ಆಗಿರುವುದು ತುಂಬಾ ಖುಷಿ ತಂದಿದೆ. ಕಾಲೇಜಿನ ಶಿಕ್ಷಕರು ನೀಡುತ್ತಿದ್ದ ಪ್ರೋತ್ಸಾಹ ಹಾಗೂ ತಂದೆ, ತಾಯಿಯ ಸಹಕಾರ ನನ್ನ ಸಾಧನೆಗೆ ನೆರವಾಗಿದೆ" ಎಂದಿದ್ದಾರೆ.
"ಮುಂದೆ ಸಿಎ ಮಾಡಿ, ಎಂಬಿಎ ಮಾಡುವ ಗುರಿಯನ್ನು ಹೊಂದಿದ್ದೇನೆ. ಈಗಾಗಲೇ ಸಿಎ ಕೋಚಿಂಗ್ ಸೆಂಟರ್‌ನಲ್ಲಿ ಸಿಎ ಕೋಚಿಂಗ್ ಪಡೆಯುತ್ತಿದ್ದೇನೆ. ಸಿಎ ಬಳಿಕ ಎಂಬಿಎ ಮಾಡುತ್ತೇನೆ" ಎಂದು ಟಾಪರ್ ಸಾಯಿ ಸಮರ್ಥ್ ಪ್ರತಿಕ್ರಿಯಿಸಿದ್ದಾರೆ.
ಮಗನ ಸಾಧನೆ ಖುಷಿ ತಂದಿದೆ: "ವಾಣಿಜ್ಯ ವಿಭಾಗದಲ್ಲಿ ನನ್ನ ಮಗ ಸಾಯಿ ಸಮರ್ಥ್ ರಾಜ್ಯಕ್ಕೆ ಟಾಪರ್ ಆಗಿರುವುದು ಖುಷಿ ತಂದಿದೆ. ಆತ ಉತ್ತಮ ಸಾಧನೆ ಮಾಡುವ ವಿಶ್ವಾಸ ನನಗೂ, ಪತ್ನಿಗೂ ಇತ್ತು" ಎಂದು ಸಾಯಿ ಸಮರ್ಥ್‌ನ ತಂದೆ ಶ್ರೀಧರ್ ಪಾನಗಂಟಿ ಪತ್ರಿಕೆಗೆ ತಿಳಿಸಿದ್ದಾರೆ.







