ಆರ್ಟಿಐ ಕಾರ್ಯಕರ್ತ ವಾಸುದೇವ ಅಡಿಗ ಕೊಲೆ ಪ್ರಕರಣ: ಜ್ಯೋತಿಷಿ ಸಹಿತ ಎಲ್ಲ ಆರೋಪಿಗಳ ದೋಷಮುಕ್ತಿ

ವಾಸುದೇವ ಅಡಿಗ
ಕುಂದಾಪುರ, ಮೇ 11: ಐದು ವರ್ಷಗಳ ಹಿಂದೆ ನಡೆದ ಆರ್ಟಿಐ ಕಾರ್ಯ ಕರ್ತ, ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ವಂಡಾರು ಗ್ರಾಮದ ಕೊಕ್ಕನಬೈಲು ನಿವಾಸಿ ವಾಸುದೇವ ಅಡಿಗ(45) ಕೊಲೆ ಪ್ರಕರಣದ ಎಲ್ಲ ಎಂಟು ಮಂದಿ ಆರೋಪಿಗಳನ್ನು ದೋಷಮುಕ್ತಿಗೊಳಿಸಿ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ.
ವಾಸುದೇವ ಅಡಿಗರ ನೆರೆಮನೆಯ ಜ್ಯೋತಿಷಿ ಕಸುಬಿನ ರಮೇಶ್ ಬಾಯರಿ, ಸುಬ್ರಹ್ಮಣ್ಯ ಉಡುಪ, ಉಮೇಶ್, ನವೀನ್, ರಾಘವೇಂದ್ರ, ಮೋಹನ, ಬೆಂಗಳೂರಿನ ನ್ಯಾಯವಾದಿ ರವಿಚಂದ್ರ, ವಿಜಯ ಸಾರಥಿ ಎಂಬವರು ದೋಷಮುಕ್ತಗೊಂಡ ಆರೋಪಿಗಳು. ಇವರ ವಿರುದ್ಧ ಸಾಕ್ಷಿನಾಶ, ಕೊಲೆ ಮತ್ತು ಕೊಲೆ ಸಂಚು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಜ.7ರಂದು ರಾತ್ರಿ ಶಿರೂರು ಮೂರುಕೈಯಿಂದ ತನ್ನ ಬೈಕಿನಲ್ಲಿ ಮನೆ ಕಡೆಗೆ ಬರುತ್ತಿದ್ದ ವಾಸುದೇವ ಅಡಿಗರನ್ನು ಆರೋಪಿಗಳು ಮನೆ ಸಮೀಪ ಅಪಹರಿಸಿ ದ್ದರು. ಅವರ ಬೈಕ್ ಮರುದಿನ ಗೋಳಿಯಂಗಡಿ ಬಳಿ ಪತ್ತೆಯಾಗಿತ್ತು. ಜ.12 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಮದಗದ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ನೆರೆಮನೆಯ ರಮೇಶ್ ಬಾಯರಿ ಹಾಗೂ ವಾಸುದೇವ ಅಡಿಗರ ನಡುವೆ ಜಾಗದ ವಿಚಾರದಲ್ಲಿ ಹಲವು ವರ್ಷಗಳಿಂದ ತಕರಾರಿದ್ದು, ಇದೇ ಕಾರಣದಲ್ಲಿ ರಮೇಶ್ ಬಾಯರಿ ಬೆಂಗಳೂರಿನ ಸುಪಾರಿ ಕಿಲ್ಲರ್ಗೆ ಹಣ ಕೊಟ್ಟು ಈ ಕೃತ್ಯ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರ ವಿರುದ್ಧ 120ಬಿ, 302, 201 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದರು.
ರಮೇಶ್ ಬಾಯರಿ ಹೊರತುಪಡಿಸಿ ಉಳಿದ ಎಲ್ಲ ಆರೋಪಿಗಳಿಗೆ ಮೊದಲಿಗೆ ಜಾಮೀನು ದೊರೆತಿತ್ತು. ಆದರೆ ರಮೇಶ್ ಬಾಯರಿಗೆ ಮೂರು ಬಾರಿ ಜಾಮೀನು ತಿರಸ್ಕೃತ ಮಾಡಲಾಯಿತು. ನಾಲ್ಕನೆ ಬಾರಿಗೆ ಕುಂದಾಪುರ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬೋರಲಿಂಗಯ್ಯ ಹಾಗೂ ಡಿವೈಎಸ್ಪಿ ಯಶೋಧ ಒಂಟಿಗೋಡಿ 143 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 96 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಅಡಿಗರ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರಿನ ಸರಕಾರಿ ವಕೀಲ ಶಿವಪ್ರಸಾದ್ ಆಳ್ವ ವಾದಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ರಾಜಶೇಖರ ಪಾಟೀಲ ಎಲ್ಲ ಎಂಟು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು.
ಆರೋಪಿಗಳ ಪರವಾಗಿ ಮಂಗಳೂರಿನ ವಿಕ್ರಮ್ ಹೆಗ್ಡೆ, ಜಗನ್ನಾಥ್ ಆಳ್ವ, ಕುಂದಾಪುರದ ರವಿಕಿರಣ್ ಮುರ್ಡೇಶ್ವರ, ಉಡುಪಿಯ ಸಂಜೀವ ಎಂ., ನರ ಸಿಂಹ ಹೆಗ್ಡೆ ವಾದಿಸಿದ್ದರು.







