‘ಬಿಜೆಪಿ ಚಾರ್ಜ್‌ಶೀಟ್’ ಸುಳ್ಳಿನ ಕಂತೆ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 11: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್ ಸುಳ್ಳಿನ ಕಂತೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತವಿರುವಂತಹ ಮಧ್ಯಪ್ರದೇಶ- ಶೇ. 9.1, ಮಹಾರಾಷ್ಟ್ರ- ಶೇ. 9.3, ರಾಜಸ್ಥಾನ-ಶೇ. 6.7, ಗುಜರಾತ್-ಶೇ. 4.3ರಷ್ಟಿದೆ. ಇನ್ನುಳಿದಂತೆ ಬಿಹಾರ- ಶೇ.6, ಕೇರಳ-ಶೇ.8.7, ಪಶ್ಚಿಮ ಬಂಗಾಲ-ಶೇ.6.1, ದಿಲ್ಲಿ-ಶೇ.6.5ರಷ್ಟು ರಾಷ್ಟ್ರೀಯ ಅಪರಾಧ ಪ್ರಕರಣಗಳು ಜರುಗುತ್ತಿವೆ. ಇವೆಲ್ಲ ಬಿಜೆಪಿಯವರಿಗೆ ಕಾಣುವುದಿಲ್ಲವೆ ಎಂದು ಅವರು ಕಿಡಿಕಾರಿದರು.
3,102 ಅತ್ಯಾಚಾರ, 2,534 ಮಹಿಳೆಯರ ಕೊಲೆ, 420 ಮಹಿಳೆಯರ ಅಪಹರಣ, 1,283 ಸರಗಳ್ಳತನ ನಡೆದಿವೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಈ ಅಂಕಿ ಅಂಶಗಳು ಯಾವ ಅವಧಿಯಲ್ಲಿ ನಡೆದಿವೆ ಎಂಬುದನ್ನು ಸ್ಪಷ್ಟಪಡಿಸಲಿ. ಕಳೆದ 50 ವರ್ಷಗಳ ಅಂಕಿ ಅಂಶಗಳನ್ನು ಜನರ ಮುಂದಿಡುತ್ತಿದ್ದಾರೆಯೇ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಗೃಹ ಸಚಿವರ ತವರು ಜಿಲ್ಲೆಯಲ್ಲೆ ಎಎಸ್ಸೈ ಒಬ್ಬ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಕರಣ ನಡೆದ ಕೂಡಲೆ ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಆತನಿಗೆ ಸರಕಾರವೇನಾದರೂ ಹೇಳಿ ಅತ್ಯಾಚಾರ ಮಾಡಿಸಿದೆಯೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರೆಸೆಸ್ಸ್ ಕಾರ್ಯಕರ್ತರಾದ ವಿಶ್ವನಾಥ್, ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ರಾಜು, ಪ್ರವೀಣ್‌ಪೂಜಾರಿ, ರುದ್ರೇಶ್, ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳನ್ನು ಈಗಾಗಲೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. 2009-2013ರ ನಡುವೆ ಆದಂತಹ ಕೊಲೆಗಳ ಆರೋಪಿಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಬಂಧಿಸಲಾಗಿದೆ ಎಂದು ಪರಮೇಶ್ವರ್ ಹೇಳಿದರು.
ಕಾರ್ತಿಕ್‌ರಾಜ್‌ನನ್ನು ಕೇರಳದಿಂದ ಮುಸ್ಲಿಮರು ಬಂದು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದ್ದರು. ಆದರೆ, ಅವರ ಸಹೋದರಿಯೆ ಕಾರ್ತಿಕ್ ರಾಜ್‌ನನ್ನು ಹತ್ಯೆ ಮಾಡಿಸಿದ್ದಾರೆ. ಈಗಾಗಲೆ ಅವರನ್ನು ವಶಕ್ಕೆ ತೆಗೆದುಕೊಂಡು ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಳಿಕೊಂಡರು. ಸಿಬಿಐ ತನಿಖಾ ವರದಿಯಲ್ಲಿ ರವಿ ಆತ್ಮಹತ್ಯೆ ಮಾಡಿಕೊಂಡಿದ್ದು ಎಂಬುದು ಸಾಬೀತಾಗಿದೆ. ಇದಕ್ಕೆಲ್ಲ ಸರಕಾರವನ್ನು ಹೊಣೆಗಾರರನ್ನಾಗಿಸುವುದು ಸರಿಯೆ ಎಂದು ಅವರು ಹೇಳಿದರು.
ರಾಜಕೀಯ ಕಾರಣಕ್ಕಾಗಿ ಬಿಜೆಪಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ನಮ್ಮ ತಪ್ಪುಗಳೇನಾದರೂ ಇದ್ದರೆ ನಿರ್ದಿಷ್ಟವಾಗಿ ಹೇಳಲಿ, ಅದನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ, ಇಂತಹ ಸುಳ್ಳಿನ ಕಂತೆಯನ್ನು ಪ್ರಕಟ ಮಾಡಿರುವುದು ಸರಿಯಲ್ಲ ಎಂದು ಪರಮೇಶ್ವರ್ ತಿಳಿಸಿದರು.
ರಾಜ್ಯ ಸರಕಾರವು ಆರ್ಥಿಕ ಶಿಸ್ತನ್ನು ಮೀರಿ ಸಾಲ ಮಾಡಿಲ್ಲ. ವಿತ್ತೀಯ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಮೂಲಭೂತಸೌಕರ್ಯ ವೃದ್ಧಿ, ಕೆರೆಗಳ ಹೂಳೆತ್ತುವುದು ಸೇರಿದಂತೆ ಇನ್ನಿತರ ಕೆಲಸಗಳಿಗೆ ಐಎಂಎಫ್, ವಿಶ್ವಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಸುಮಾರು 30-40 ಸಾವಿರ ಕೋಟಿ ರೂ.ಸಾಲ ಪಡೆಯಲು ಅವಕಾಶವಿತ್ತು. ಆದರೆ, ನಾವು ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ 2,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಲಾಗಿದೆ. ಯಾವ ಅವಧಿಯಲ್ಲಿ ಇಷ್ಟೊಂದು ರೈತರ ಆತ್ಮಹತ್ಯೆ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಏನು ನೆರವು ನೀಡಿದೆ. ಸಂಸದರಾಗಿರುವ ಯಡಿಯೂರಪ್ಪ, ಪ್ರಧಾನಿ ಅಥವಾ ಸಂಸತ್ತಿನ ಎದುರು ರೈತರಿಗೆ ನೆರವು ಕೊಡಿಸಲು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪರಮೇಶ್ವರ್ ಪ್ರಶ್ನಿಸಿದರು.
ರಾಜ್ಯ ಸರಕಾರವು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುತ್ತಿದ್ದ ಪರಿಹಾರದ ಮೊತ್ತವನ್ನು 2 ರಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಕೇಂದ್ರ ಸರಕಾರ ಆತ್ಮಹತ್ಯೆಗೆ ಶರಣಾದ ರೈತರಿಗೆ ಏನು ನೆರವು ನೀಡಿದೆ. 2012ರಲ್ಲಿ ನಾನು ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತು ಚಾರ್ಜ್‌ಶೀಟ್ ಬಿಡುಗಡೆ ಮಾಡಿದ್ದೆ. ಗಣಿಧಣಿ ರೆಡ್ಡಿ ಸಹೋದರರು ಲಕ್ಷಾಂತರ ಕೋಟಿ ರೂ.ಗಳನ್ನು ಲೂಟಿ ಮಾಡಿದ್ದು ಸುಳ್ಳೆ ಎಂದು ಅವರು ಕೇಳಿದರು.
ನಂಜನಗೂಡು ಹಾಗೂ ಗುಂಡ್ಲುಪೇಟೆ ಕ್ಷೇತ್ರದ ಜನ ಈಗಾಗಲೆ ಬಿಜೆಪಿಗೆ ಬುದ್ಧಿ ಕಲಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಪರಾಭವಗೊಂಡವರು ಏನಾಗುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪರಮೇಶ್ವರ್ ತಿಳಿಸಿದರು.







