ಪಿಯುಸಿ: ಮೂರು ವರ್ಷಗಳ ಬಳಿಕ ರಾಜ್ಯದಲ್ಲಿ ಅಗ್ರಸ್ಥಾನಕ್ಕೇರಿದ ಉಡುಪಿ

ಉಡುಪಿ, ಮೇ 11: ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೂರು ವರ್ಷಗಳ ಸತತ ಪ್ರಯತ್ನದ ಬಳಿಕ ಮತ್ತೆ ರಾಜ್ಯದಲ್ಲಿ ಅಗ್ರಸ್ಥಾನಕ್ಕೇರಿದೆ. 2013ರಲ್ಲಿ ಶೇ.86.24 ಫಲಿತಾಂಶದೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದ ಉಡುಪಿ, 2014ರಲ್ಲಿ ಶೇ.85.57ನೊಂದಿಗೆ ಅಗ್ರಸ್ಥಾನವನ್ನು ದ.ಕ. ಜಿಲ್ಲೆಗೆ ಬಿಟ್ಟುಕೊಟ್ಟಿತ್ತು. 2015ರಲ್ಲಿ ಫಲಿತಾಂಶದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರೂ ಶೇ.92.32 ಸಾಧನೆಯೊಂದಿಗೆ ಎರಡನೇ ಸ್ಥಾನವನ್ನಷ್ಟೇ ಪಡೆಯುವಲ್ಲಿ ಯಶಸ್ವಿಯಾಗಿತ್ತು. 2016ರಲ್ಲೂ ಮತ್ತೆ 90.35ಶೇ. ಫಲಿತಾಂಶದೊಂದಿಗೆ ದ.ಕ. (ಶೇ.90.48) ನಂತರದ ಸ್ಥಾನವನ್ನು ಪಡೆದಿತ್ತು.
ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನವನ್ನೇರುವ ದೃಢಸಂಕಲ್ಪದೊಂದಿಗೆ ವಿಶೇಷ ಪ್ರಯತ್ನ ನಡೆಸಿದ ಉಡುಪಿ ಜಿಲ್ಲೆ ಈ ಬಾರಿ 90.01ಶೇ. ಸಾಧನೆಯೊಂದಿಗೆ ಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ದಕ್ಷಿಣ ಕನ್ನಡಕ್ಕಿಂತ ಕೇವಲ 0.13 ಹಿನ್ನಡೆ ಅನುಭವಿಸಿದ್ದ ಉಡುಪಿ ಈ ಬಾರಿ 0.09ಶೇ. ಅಂತರದಲ್ಲಿ ಅದನ್ನು ಹಿಂದಿಕ್ಕಿದೆ. ಇದರೊಂದಿಗೆ ವಿಜ್ಞಾನ ವಿಭಾಗದ ಅಗ್ರ ರ್ಯಾಂಕಿಂಗ್ ಸಹ ಉಡುಪಿಯ ಪಾಲಾಗಿದೆ.
ಗಂಗೊಳ್ಳಿಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಈ ಬಾರಿ ಗರಿಷ್ಠ 600ರಲ್ಲಿ 596 ಅಂಕಗಳನ್ನು ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಅಗ್ರಸ್ಥಾನವನ್ನು ಮಂಗಳೂರಿನ ವಿದ್ಯಾರ್ಥಿನಿಯೊಂದಿಗೆ ಹಂಚಿಕೊಂಡಿದ್ದಾಳೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಧಿಕಾ ಎಂ.ಪೈ ಅವರು ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಯಾವುದೇ ಕೋಚಿಂಗ್ ಇಲ್ಲದೇ ಕೇವಲ ಅಧ್ಯಾಪಕರು ಮಾಡಿದ ಪಾಠ ಹಾಗೂ ತಾನು ನಡೆಸಿದ ಅಧ್ಯಯನದ ಮೂಲಕ ಮಾಡಿದ ಆಕೆಯ ಈ ಸಾಧನೆ ವಿಶೇಷ ಪ್ರಶಂಸೆಗೆ ಅರ್ಹವಾಗಿದೆ.
ಕಾಮರ್ಸ್ ವಿಭಾಗದಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಉತ್ಪಲ ಶೆಣೈ ಅವರು 593 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಮೂರನೇ ಹಾಗೂ ರಕ್ಷಾ ಎನ್.ಕೆ. 592 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.
ಶೇ.100 ಫಲಿತಾಂಶ: ಈವರೆಗೆ ದೊರೆತ ಮಾಹಿತಿಯಂತೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜು ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ ಎಂದು ಡಿಡಿಪಿಯು ಆರ್.ಬಿ.ನಾಯಕ್ ತಿಳಿಸಿದರು. ಕಾಲೇಜುಗಳು ನಾಳೆ ಅಧಿಕೃತ ಫಲಿತಾಂಶಗಳನ್ನು ಪಡೆಯುವುದರಿಂದ ನಾಳೆಯಷ್ಟೇ ಸಂಪೂರ್ಣ ಮಾಹಿತಿಗಳು ತಿಳಿಯಲಿವೆ ಎಂದರು.
"ಜಿಲ್ಲೆಯಲ್ಲಿ 103 ಪ.ಪೂ.ಕಾಲೇಜುಗಳಲ್ಲಿ ಒಟ್ಟು 16,428 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 7,925 ಬಾಲಕರು ಹಾಗೂ 8,503 ಬಾಲಕಿಯರು. ಜಿಲ್ಲೆಯಲ್ಲಿ ಯಾವುದೇ ಕಾಲೇಜು ಶೂನ್ಯ ಫಲಿತಾಂಶ ಪಡೆದ ದಾಖಲೆಗಳು ಇಲ್ಲ. ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿರುವುದು ಇಲಾಖೆಗೆ ಖುಷಿ ನೀಡಿದೆ. ಇದನ್ನು ನಾವು ನಿರೀಕ್ಷಿಸಿದ್ದೆವು ಎಂದು ಆರ್.ಬಿ.ನಾಯಕ್ ‘ವಾರ್ತಾಭಾರತಿ’ಗೆ ತಿಳಿಸಿದರು. ಈ ಬಾರಿ ರಾಜ್ಯದಲ್ಲಿ ಅಗ್ರಸ್ಥಾನ ಪಡೆಯಬೇಕೆಂಬ ದೃಢಸಂಕಲ್ಪ ದೊಂದಿಗೆ ಪ್ರಾಧ್ಯಾಪಕರುಗಳಿಗೆ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು" ಎಂದರು.
ಅಲ್ಲದೇ ಪ್ರತಿ ಕಾಲೇಜಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ಕೋಚಿಂಗ್ ನೀಡಲಾಗಿತ್ತು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೂ ವಿಶೇಷ ಗಮನ ಹರಿಸಲಾಗಿತ್ತು. ಇದರಿಂದಾಗಿ ನಮ್ಮ ಪ್ರಯತ್ನಗಳು ಫಲ ನೀಡಿದ ತೃಪ್ತಿ ಇಲಾಖೆಗಿದೆ ಎಂದು ನಾಯಕ್ ವಿವರಿಸಿದರು.