ನೀರಿನ ಮಹತ್ವ ತಿಳಿಸಲು ಕೃಷಿ ಇಲಾಖೆಯಿಂದ ಅಭಿಯಾನ: ಸಚಿವ ಕೃಷ್ಣಬೈರೇಗೌಡ

ಬೆಂಗಳೂರು, ಮೇ 11: ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಕೃಷಿ ಇಲಾಖೆ ಎಲ್ಲ ಕಾರ್ಯಕ್ರಮಗಳಲ್ಲಿಯೂ ಜನ ಸಾಮಾನ್ಯರಿಗೆ ನೀರಿನ ಮಹತ್ವ ತಿಳಿಸುವ ದೃಷ್ಟಿಯಿಂದ ಜಾಗೃತಿ ಅಭಿಯಾನ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಇಲಾಖೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಇಲಾಖೆಯಿಂದ ಏರ್ಪಡಿಸಿದ್ದ ಕೃಷಿ ಉತ್ಪಾದನೆ ಹಾಗೂ ಪರ್ಯಾಯ ಬೆಳೆ ಸಿದ್ಧತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನೀರು ದುರ್ಬಳಕೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿಯೂ ಹೆಚ್ಚಾಗಿದ್ದು ಇದನ್ನು ತಪ್ಪಿಸಬೇಕು ಎಂದರು.
ಕೃಷಿಯ ಭವಿಷ್ಯ ನೀರಿನ ಮೇಲೆ ನಿಂತಿದ್ದು, ರೈತರಿಗೆ ನೀರಿನ ಮಹತ್ವ ತಿಳಿಸಬೇಕು. ನೀರಿನ ಅಭಾವ ಇರುವ ಕಡೆ ನೀರಿನ ವೌಲ್ಯ ಗೊತ್ತಾಗಬೇಕು ಎಂದ ಅವರು, ಕೃಷಿ ಇಲಾಖೆ, ಎಲ್ಲ ಕೃಷಿ ವಿಶ್ವ ವಿದ್ಯಾಲಯಗಳು ಹಾಗೂ ಅಧಿಕಾರಿಗಳು ನೀರಿನ ಬಗ್ಗೆ ಜಾಗೃತಿ ಮೂಡಿಸ ಬೇಕೆಂದು ಸೂಚಿಸಿದರು.
ಕೃಷಿ ವಿಸ್ತರಣೆ: ನವಣೆ, ಆರ್ಕ, ಸಾಮೆ ಸೇರಿದಂತೆ ಸಿರಿಧಾನ್ಯ ಬೆಳೆ ಕ್ಷೇತ್ರವನ್ನು 20 ಸಾವಿರ ಹೆಕ್ಟೇರ್‌ನಿಂದ 40 ಸಾವಿರ ಹೆಕ್ಟೇರ್‌ಗೆ ವಿಸ್ತರಿಸಬೇಕು. ಅದೇ ರೀತಿ ರಾಗಿ, ಜೋಳ, ಸಜ್ಜೆ ಉತ್ಪಾದನಾ ಪ್ರದೇಶವನ್ನು ಶೇ. 20ರಷ್ಟು ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಇಲಾಖೆ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಕೇಂದ್ರ ಸರಕಾರ ಅನುದಾನ ಕಡಿತಗೊಳಿಸಿದೆ. ಮಾತ್ರವಲ್ಲ, ಆ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಆಗುತ್ತಿಲ್ಲ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.
ಗುಣಮಟ್ಟದ ಬಿತ್ತನೆ ಬೀಜ: ರೈತರಿಗೆ ಪ್ರಮಾಣೀಕೃತ ಗುಣಮಟ್ಟದ ಬಿತ್ತನೆ ಬೀಜ ನೀಡಲು ರಾಷ್ಟ್ರೀಯ ಬೀಜ ನಿಗಮದ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು, ರೈತರಿಗೆ ಉತ್ತಮ ಗುಣಮಟ್ಟದ ಪ್ರಮಾಣೀಕೃತ ಬೀಜಗಳನ್ನು ರಾಜ್ಯ ಬೀಜ ನಿಗಮವೆ ಒದಗಿಸಲಿದೆ ಎಂದು ತಿಳಿಸಿದರು.
ಕೇಂದ್ರ-ರಾಜ್ಯ ಬೀಜ ನಿಗಮಗಳ ಮೂಲಕವೇ ರೈತರಿಂದ ಗುಣಮಟ್ಟದ ಬಿತ್ತನೆ ಬೀಜ ಉತ್ಪಾದಿಸಿ ರೈತರಿಗೆ ಒದಗಿಸಬೇಕೆಂದ ಅವರು, ಬಿತ್ತನೆ ಬೀಜ ಸಹಾಯಧನ ಮಧ್ಯವರ್ತಿಗಳ ಪಾಲಾಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ 135 ಲಕ್ಷ ಟನ್ ಆಹಾರಧಾನ್ಯಗಳ ಉತ್ಪಾದನೆ ಹಾಗೂ 14 ಲಕ್ಷ ಟನ್ ಕಾಳುಗಳನ್ನು ಉತ್ಪಾದನೆ ಗುರಿ ಹೊಂದಲಾಗಿದೆ ಎಂದ ಅವರು, 73 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದೆ. 8.5ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಈಗಾಗಲೇ ಅಗತ್ಯ ಪ್ರಮಾಣದಷ್ಟು ಬಿತ್ತನೆ ಬೀಜ ದಾಸ್ತಾನಿದೆ ಎಂದರು.
ಕಾರ್ಯಾಗಾರದಲ್ಲಿ ರಾಜ್ಯ ಸರಕಾರದ ಅಭಿವೃದ್ಧಿ ಆಯುಕ್ತ ವಿಜಯಭಾಸ್ಕರ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ಆಯುಕ್ತ ಸತೀಶ್, ರಾಜೀವ್ ರಂಜನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.







