ರಾಮನಗರದ ‘ತಂಗುಛತ್ರಿ’: ತಲೆ ಮೇಲಿನ ತೂಗುಕತ್ತಿ!

ಸಾಗರ, ಮೇ 11: ನಗರದ ಹೊರವಲಯದಲ್ಲಿ ಹೊಸನಗರ ರಸ್ತೆಯ ಪಕ್ಕದ ರಾಮನಗರದ ಬಸ್ ತಂಗುದಾಣ ಅಕ್ಷರಶಃ ನೆರಳು ನೀಡುವ ಛತ್ರಿಯ ಮಾದರಿಯಲ್ಲಿದೆ. ಇಂದಿನ ಬಿಸಿಲಿನಲ್ಲಿ ಬಸ್‌ಗೆ ಕಾಯುವವರಲ್ಲದೆ ಸುಸ್ತಾಗಿ ಸುಧಾರಿಸಿಕೊಳ್ಳಬಯಸುವ ಪಾದಚಾರಿಗಳು, ಸಂಜೆಯ ವಾಕಿಂಗ್ ಹವ್ಯಾಸಿಗಳು, ವೃದ್ಧರನ್ನು ಕೂಡ ಆಕರ್ಷಿಸುವಂತಿದೆ. ಇದನ್ನು ನೆರಳು ನೀಡುವ ತಂಗುಛತ್ರಿ ಎನ್ನುವುದಕ್ಕಿಂತ ತಲೆ ಮೇಲಿನ ತೂಗುಕತ್ತಿ ಎಂತಲೂ ಕರೆಯಬಹುದು.
ಈ ಬಸ್ ನಿಲ್ದಾಣವನ್ನು ಒಂದು ಪಿಲ್ಲರ್‌ನ ಮೇಲೆ ಛಾವಣಿ ಮಾದರಿಯಲ್ಲಿ ಕಟ್ಟಲಾಗಿದೆ. ಕೊಡೆ ಹಿಡಿದು ನೆರಳಿಗಾಗಿ ಅರಸುವವರನ್ನು ಆಹ್ವಾನಿಸುವಂತಹ ಈ ರಚನೆ ಗಮನ ಸೆಳೆಯುತ್ತದೆ. ಈ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಮತ್ತು ಗಾರ್ಮೆಂಟ್ಸ್‌ಗೆ ಹೋಗುವ ಅತೀ ಹೆಚ್ಚು ಮಹಿಳೆಯರು ಸಾಗರಕ್ಕೆ ಹೋಗಲು ಬಸ್ಸಿಗಾಗಿ ಕಾದು ಕುಳಿತಿರುತ್ತಾರೆ. ಒಂದರ್ಥದಲ್ಲಿ ಇದು ಸದಾ ಜನನಿಬಿಡ ಬಸ್ ಪ್ರಯಾಣಿಕರ ತಂಗುದಾಣ.
ಕೆಲ ದಿನಗಳ ಹಿಂದೆ ಇದರ ಕಂಬದಲ್ಲಿ ಬಿರುಕು ಮೂಡಿದೆ. ಸಿಮೆಂಟಿನ ಚಕ್ಕಳಿಕೆಗಳು ಹೊರಬಂದು ಕಬ್ಬಿಣದ ಸರಳುಗಳು ಮಾತ್ರ ಛಾವಣಿಯನ್ನು ಆಧರಿಸಿ ನಿಂತಿವೆೆ. ಛಾವಣಿಯ ಭಾರದ ಕಾರಣ ಯಾವುದೇ ಸಂದಭರ್ದಲ್ಲಿ ಇದು ಇದ್ದಕ್ಕಿದ್ದಂತೆ ನೆಲಕ್ಕೆ ಒರಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಈ ಛಾವಣಿ ಪ್ರಯಾಣಿಕರ ತಲೆ ಮೇಲೆ ಬೀಳುವ ಅಪಾಯ ಇರುವ ಕುರಿತು ನಗರಸಭೆ ಆಡಳಿತಕ್ಕೆ ಮತ್ತು ಈ ಭಾಗದ ನಗರಸಭೆ ಸದಸ್ಯ ವೀಣಾ ಪರಮೇಶ್ವರ್ ಅವರ ಗಮನಕ್ಕ್ಕೆ ತರಲಾಗಿದ್ದರೂ ಅದನ್ನು ಅವರು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.







