ಮಾನಭಂಗ ಯತ್ನ: ಆರೋಪಿಗಳಿಗೆ ಜೈಲು ಶಿಕ್ಷೆ
ಚಿಕ್ಕಮಗಳೂರು, ಮೇ 11: ಮಹಿಳೆಯ ಮಾನಭಂಗ ಮಾಡಲು ಯತ್ನಿಸಿದ ಆರೋಪಿಗಳಿಗೆ ಚಿಕ್ಕಮಗಳೂರಿನ 2ನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
2015ರ ಜು.12ರಂದು ಚಿಕ್ಕಮಗಳೂರಿನ ಬಸವನಹಳ್ಳಿ ಠಾಣಾ ವ್ಯಾಪ್ತಿಯ ವಿಜಯನಗರ ಬಡಾವಣೆಯ ಪ್ಲೇಗಿನಮ್ಮ ಬೀದಿಯಲ್ಲಿ ವಾಸವಾಗಿರುವ ರತ್ನಾಬಾಯಿ ಎಂಬವರ ಮಾನಭಂಗ ಯತ್ನ ನಡೆದಿತ್ತು.
ರತ್ನಾಬಾಯಿ ಮನೆಯ ಎದುರುಗಡೆಯ ತಿಲಕ್‌ಪಾರ್ಕ ಒಳಗಡೆ ಇರುವ ಬೋರ್‌ವೆಲ್‌ಗೆ ನೀರು ತರಲು ಹೋಗಿದ್ದರು. ಈ ಸಮಯದಲ್ಲಿ ಆರೋಪಿ ಅಶೋಕ ಎಂಬಾತನು ರತ್ನಾಬಾಯಿಯ ಮಾನಭಂಗ ಮಾಡಲು ಪ್ರತ್ನಿಸಿದಾಗ ಆಕೆಯ ಮಗ ರವಿ ಬಂದು ಬಿಡಿಸಿದ್ದ. ಈ ಹಿನ್ನೆಲೆಯಲ್ಲಿ ಬಸವನ ಹಳ್ಳಿ ಠಾಣಾ ಪೊಲೀಸರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ 2ನೆ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ನಿವೇದಿತಾ.ಎಂ.ಎಂ. ಆರೋಪಿ ಅಶೋಕನಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 2000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಎಚ್. ಎಸ್.ಲೋಹಿತಾಶ್ವಾಚಾರ್ ಪ್ರಕರಣ ನಡೆಸಿದ್ದರು.





