ಚಿಕ್ಕಮಗಳೂರಿಗೆ ಮಧುಸೂದನ್ ಪ್ರಥಮ
ಪಿಯು ಫಲಿತಾಂಶ

ಚಿಕ್ಕಮಗಳೂರು, ಮೇ.11: ದ್ವಿತೀಯ ಪಿಯು ಫಲಿತಾಂಶದಲ್ಲಿ ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಧುಸೂದನ್ ಮೇಲುಗೈ ಸಾಧಿಸಿದ್ದಾರೆ.
ವೆಬ್‌ಸೈಟ್‌ಗಳಲ್ಲಿ ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ ವಿದ್ಯಾರ್ಥಿ ಮದಸೂಧನ್ ಕನ್ನಡ, ಗಣಿತ, ರಸಾಯನಶಾಶ್ತ್ರ, ಭೌತಶಾಶ್ತ್ರಗಳಲ್ಲಿ ನೂರಕ್ಕೆ ನೂರು, ಇಂಗ್ಲಿಷ್‌ನಲ್ಲಿ 93 ಹಾಗೂ ಜೀವಶಾಸ್ತ್ರ ವಿಷಯದಲ್ಲಿ 99 ಅಂಕ ಸೇರಿದಂತೆ 592 ಅಂಕಗಳಿಸುವ ಮೂಲಕ ಜಿಲ್ಲೆಗೆ ಟಾಪರ್‌ಆಗಿ ಹೊರಹೊಮ್ಮಿದ್ದಾನೆ.
ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ 222 ವಿದ್ಯಾರ್ಥಿಗಳಲ್ಲಿ 109 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 110 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 1 ದ್ವಿತೀಯ ಶ್ರೇಣಿ ಸೇರಿದಂತೆ 220 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ ಶಾಲೆಯ ಪ್ರಾಚಾರ್ಯೆ ವಿಜಯಾನಾಗೇಶ್ ಮತ್ತು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಪರಸ್ಪರ ಶುಭಾಶಯ ವಿನಿಮಯ ಮಾಡಿದರು.
ವಿಜಯಾನಾಗೇಶ್ ಮಾತನಾಡಿ, ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ನಮ್ಮ ಕಾಲೇಜು ವಿದ್ಯಾರ್ಥಿ ಮದಸೂಧನ್ 592 ಅಂಕಗಳಿಸಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವುದು ಸಂತೋಷ ತಂದಿದೆ. 109 ಅತ್ಯುನ್ನತ ಶ್ರೇಣಿ ಸೇರಿದಂತೆ 220 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶಾಲೆಯ ಹಾಗೂ ಪೋಷಕರ ಕೀರ್ತಿಯನ್ನು ಬೆಳಗಿದ್ದಾರೆ. ಸಂಸ್ಥೆಯ ಉಪನ್ಯಾಸಕರುಗಳ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ರಾಜ್ಯಕ್ಕೆ ಉನ್ನತ ಸ್ಥಾನ ಪಡೆಯುವಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಸಂಸ್ಥಾಪಕ ನಾಗೇಶ್, ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್, ಪ್ರಾಂಶುಪಾಲ ನಾಗರಾಜ್, ಶಾರದಾ ಕಾರ್ತಿಕ್ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.







