ದಾವಣಗೆರೆಗೆ 19ನೆ ಸ್ಥಾನ
ಪಿಯು ಫಲಿತಾಂಶ
ದಾವಣಗೆರೆ, ಮೇ 11: ಮಧ್ಯಕರ್ನಾಟಕ ವಿದ್ಯಾಕಾಶಿ ದಾವಣಗೆರೆ ಜಿಲ್ಲೆ ದ್ವಿತೀಯ ಪಿಯುಸಿಯಲ್ಲಿ ರಾಜ್ಯದಲ್ಲಿ 19ನೆ ಸ್ಥಾನ ಪಡೆಯುವ ಮೂಲಕ ಕಳೆದ ವರ್ಷಕ್ಕಿಂತ ಏರಿಕೆ ಕಂಡುಕೊಂಡಿದ್ದು, ಜಿಲ್ಲೆಯ ಒಟ್ಟು ಫಲಿತಾಂಶದಲ್ಲಿ ಶೇ. 55.17 ಪಡೆಯುವ ಮೂಲಕ ಕಳೆದ ಬಾರಿಗಿಂತ ಕುಸಿತ ಕಂಡಿದೆ.
ಈ ಬಾರಿಯು ಸಹ ಜಿಲ್ಲೆಯಲ್ಲಿ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳು ಸೇರಿ 11,143, ವಿದ್ಯಾರ್ಥಿನಿಯರು 11,783 ಸೇರಿದಂತೆ ಒಟ್ಟು 22,926 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 11,212 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 4,745 ವಿದ್ಯಾರ್ಥಿಗಳು ಹಾಗೂ 6,467 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಶೇ. 50.09ರಷ್ಟು ಹಾಗೂ ನಗರ ಭಾಗದಲ್ಲಿ 56.46ರಷ್ಟು ಫಲಿತಾಂಶ ಬಂದಿದೆ. ಇದರಲ್ಲಿ ನೂತನ ವಿದ್ಯಾರ್ಥಿಗಳು ಒಟ್ಟು 18,535 ಇದ್ದು, ಅದರಲ್ಲಿ 10,225 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 3,873 ಖಾಸಗಿ ವಿದ್ಯಾರ್ಥಿಗಳಲ್ಲಿ ಕೇವಲ 939 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಂತೆ ಹಳೆಯ ವಿದ್ಯಾರ್ಥಿಗಳು ಒಟ್ಟು 518 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕಲಾ ವಿಭಾಗದಲ್ಲಿ ಒಟ್ಟು 7,882 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 2,775 ( ಶೇ. 40.14) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,705 ವಿದ್ಯಾರ್ಥಿಗಳಲ್ಲಿ 2857 (ಶೇ. 55.31) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದ ಒಟ್ಟು 9,337 ವಿದ್ಯಾರ್ಥಿಗಳಲ್ಲಿ 5,580 (ಶೇ. 66.64) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿಜಯಾನಂದ ತಿಳಿಸಿದ್ದಾರೆ.
ವೆಬ್‌ಸೈಟ್‌ಗೆ ಮುಗಿಬಿದ್ದ ವಿದ್ಯಾರ್ಥಿಗಳು: ಇಂದು ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದೆಲ್ಲೆಡೆ ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಿಗೆ ಮುಗಿಬಿದ್ದು ತಮಗೆ ಬಂದಿರುವ ಅಂಕಗಳನ್ನು ತಿಳಿಯಲು ಕಾತುರರಾಗಿದ್ದುದು ಕಂಡುಬಂತು. ಸರತಿ ಸಾಲಿನಲ್ಲಿ ಚಡಪಡಿಸುತ್ತಿದ್ದರು.







