ಸಿಎ ಆಗುವಾಸೆ: ಉತ್ಪಲ ಶೆಣೈ

ಉಡುಪಿ, ಮೇ 11: ಕಾಮರ್ಸ್‌ನಲ್ಲಿ ಪದವಿಯೊಂದಿಗೆ ಲೆಕ್ಕ ಪರಿಶೋಧಕ (ಸಿಎ) ಪದವಿಯನ್ನು ಕಲಿಯುವಾಸೆ ಇದೆ ಎಂದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿರುವ ನಗರದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉತ್ಪಲ ಶೆಣೈ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಚೀಫ್ ಮ್ಯಾನೇಜರ್ ಆಗಿರುವ ಕೆ.ಉಮೇಶ್ ಶೆಣೈ ಹಾಗೂ ಗೃಹಿಣಿ ಅರುಣಾ ಯು.ಶೆಣೈ ಅವರ ಪುತ್ರಿಯಾಗಿರುವ ಉತ್ಪಲ ಅವರು ಸಿಎಗಾಗಿ ಈಗಾಗಲೇ ಸಿಪಿಟಿ ಕೋಚಿಂಗನ್ನು ತೃಶಾದಲ್ಲಿ ಪಡೆದಿದ್ದು, ಮುಂದಿನ ತಿಂಗಳು ಸಿಪಿಟಿ ಪರೀಕ್ಷೆ ಬರೆಯಲಿದ್ದಾರೆ. ಇವರ ಸಹೋದರಿ ಎಂಐಟಿಯಲ್ಲಿ ಎಂ.ಟೆಕ್ ಮಾಡುತ್ತಿದ್ದಾರೆ.
"ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿರುವುದರಿಂದ ತುಂಬಾ ಖುಷಿಯಾಗಿದೆ. ನಾನೇನೂ ರ್ಯಾಂಕ್ ಬರುವುದನ್ನು ನಿರೀಕ್ಷಿಸಿರಲಿಲ್ಲ. ನಾನು ಎಣಿಸಿದಷ್ಟು ಮಾತ್ರ ಅಂಕಗಳು ಬಂದಿವೆ. ಕಾಲೇಜಿನಲ್ಲಿ ಅಧ್ಯಾಪಕರು ಕಲಿಸಿದ್ದನ್ನು ಶ್ರದ್ಧೆಯಿಂದ ಓದುತ್ತಿದ್ದೆ. ಸಿಪಿಟಿಗಾಗಿ ಪಡೆದ ಕೋಚಿಂಗ್ ಈ ಸಾಧನೆಯಲ್ಲಿ ಸಾಕಷ್ಟು ನೆರವಾಗಿದೆ" ಎಂದರು.
ಹೆತ್ತವರು ಹಾಗೂ ಅಕ್ಕನ ಬೆಂಬಲ ಮತ್ತು ಸಹಕಾರ, ಕಾಲೇಜಿನ ಪ್ರತಿಯೊಬ್ಬ ಅಧ್ಯಾಪಕರ ಪ್ರೋತ್ಸಾಹದಿಂದ ತನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಉಜ್ವಲ ತಿಳಿಸಿದರು.
ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ರಕ್ಷಾ ಎನ್.ಕೆ. ಅವರು 592 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನವಮಿ ಎಸ್.ಪ್ರಭು 590 ಅಂಕಗಳನ್ನು ಪಡೆದು ಕಾಲೇಜಿನಲ್ಲಿ ಅಗ್ರಸ್ಥಾನಿಯಾಗಿದ್ದರೆ, ವೈಷ್ಣವಿ ಜನಾರ್ದನ್ 589 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.







