ಇಂಡಿಯನ್ ಜಿಪಿ ಅಥ್ಲೆಟಿಕ್ಸ್: ಕನ್ನಡತಿ ಪೂವಮ್ಮ, ನೀರಜ್,ಅನುಗೆ ಚಿನ್ನ

ಹೊಸದಿಲ್ಲಿ, ಮೇ 11: ಅಗ್ರ ಅಥ್ಲೀಟ್‌ಗಳಾದ ಕನ್ನಡತಿ ಎಂ.ಆರ್. ಪೂವಮ್ಮ, ನೀರಜ್ ಚೋಪ್ರಾ ಹಾಗೂ ಅನ್ನು ರಾಣಿ ಇಂಡಿಯನ್ ಗ್ರಾನ್‌ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
ಗುರುವಾರ ಇಲ್ಲಿನ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 80.49 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದರು. ಕಳೆದ ವರ್ಷ ವಿಶ್ವ ದಾಖಲೆ ನಿರ್ಮಿಸಿರುವ ಹರ್ಯಾಣದ ಅಥ್ಲೀಟ್ ಈಗಾಗಲೇ ವಿಶ್ವ ಜೂ.ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದಾರೆ.
ಮಹಿಳೆಯರ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ನ್ಯಾಶನಲ್ ಚಾಂಪಿಯನ್ ಉತ್ತರಪ್ರದೇಶದ ಅನ್ನು ರಾಣಿ 59.75 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದರು. ಕರ್ನಾಟಕದ ರಶ್ಮಿ(47.38 ಮೀ.) ಹಾಗೂ ಪೆಗು ರಂಜನ್(44.14 ಮೀ.) ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನ ಪಡೆದರು.
ಅಗ್ರ ಓಟಗಾರ್ತಿ ಪೂವಮ್ಮ ರಾಜು ಮಹಿಳೆಯರ 400 ಮೀ. ಓಟದಲ್ಲಿ 52.66 ನಿಮಿಷದಲ್ಲಿ ಗುರಿ ತಲುಪಿ ಬಂಗಾರದ ಪದಕ ಬಾಚಿಕೊಂಡರು. ಕೇರಳದ ಜಿಸ್ನಾ ಮ್ಯಾಥ್ಯೂ(52.67 ನಿ.) ಹಾಗೂ ಬಂಗಾಳದ ದೇಬಶ್ರೀ ಮಜುಂದಾರ್(54.00) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.







