ರಾಜಸ್ಥಾನ: ಗೋಡೆ ಕುಸಿತ 26 ಸಾವು, ಹಲವು ಮಂದಿಗೆ ಗಾಯ
ಜೈಪುರ್, ಮೇ 11: ಭರತಪುರದ ಸೇವಾರ್ ರಸ್ತೆ ಪಕ್ಕದಲ್ಲಿರುವ ಮದುವೆ ಹಾಲ್ ಒಂದರ ಗೋಡೆಯೊಂದು ಬುಧವಾರ ರಾತ್ರಿ ಬೀಸಿದ ಭಾರೀ ಗಾಳಿಯ ಸಂದರ್ಭ ಕುಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 26 ಜನ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 28 ಜನ ಇತರರು ಗಾಯಗೊಂಡಿದ್ದಾರೆ. ಸಭಾಂಗಣದಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಭಾರೀ ಗಾಳಿ ಬೀಸಲಾರಂಭಿಸಿದಾಗ ಅಲ್ಲಿ ನೆರೆದಿದ್ದ ಜನರು ಗೋಡೆಯೊಂದರ ಪಕ್ಕದಲ್ಲಿದ್ದ ಶೆಡ್ಡಿನಲ್ಲಿ ನಿಂತಿದ್ದಾಗ ಆ ಗೋಡೆ ಕುಸಿದು ಬಿದ್ದಿದೆ. ಮೃತರಲ್ಲಿ 11 ಪುರುಷರು ಹಾಗೂ ಏಳು ಮಹಿಳೆಯರು ಸೇರಿದ್ದಾರೆ. ಗೋಡೆ ಸುಮಾರು 90 ಅಡಿ ಅಗಲ ಹಾಗೂ 12 ರಿಂದ 13 ಅಡಿ ಎತ್ತರವಿತ್ತು ಹಾಗೂ ಅದರ ಒಂದು ಪಾರ್ಶ್ವದಲ್ಲಿ ಆಹಾರ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿತ್ತು.
ಗಾಂಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಇಂದು ಪೋಸ್ಟ್‌ಮಾರ್ಟಂ ನಡೆಯಲಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಮ್ಮ ಸಂತಾಪ ತಿಳಿಸಿದ್ದಾರಲ್ಲದೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದಾರೆ.





