ಭಾರತದ ಮೊದಲ ರಾಷ್ಟ್ರಪತಿ ದಲಿತ ಮಹಿಳೆ ಆಗಬೇಕೆಂದು ಬಯಸಿದ್ದ ಮಹಾತ್ಮಾ ಗಾಂಧಿ
ಹೊಸದಿಲ್ಲಿ, ಮೇ 11: ಅಧ್ಯಕ್ಷೀಯ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ಬಿಡುಗಡೆಗೊಂಡಿರುವ ಪುಸ್ತಕವೊಂದು, ದಲಿತ ಮಹಿಳೆಯೋರ್ವಳು ಭಾರತದ ಮೊದಲ ರಾಷ್ಟ್ರಪತಿಯಾಗಬೇಕೆಂದು ಮಹಾತ್ಮಾ ಗಾಂಧಿಯವರು ಬಯಸಿದ್ದರು. ಆದರೆ ಅವರ ಈ ‘ತೀವ್ರಗಾಮಿ ಸಲಹೆ’ಯನ್ನು ತಳ್ಳಿಹಾಕಲಾಗಿತ್ತು ಎಂದು ಹೇಳಿದೆ.
ಕೆ.ಆರ್.ನಾರಾಯಣನ್ ರೂಪದಲ್ಲಿ ತನ್ನ ಮೊದಲ ದಲಿತ ರಾಷ್ಟ್ರಪತಿಯನ್ನು ಪಡೆಯಲು ಭಾರತವು 1997ರವರೆಗೂ ಕಾಯಬೇಕಾಗಿತ್ತು ಎಂದಿರುವ ಪುಸ್ತಕದಲ್ಲಿ ಮಹಾತ್ಮಾರ ಮೊಮ್ಮಗ ಹಾಗೂ ಶಿಕ್ಷಣತಜ್ಞ ರಾಜಮೋಹನ್ ಗಾಂಧಿ ಅವರು ಕೆಲವು ಮಾತುಕತೆಗಳನ್ನು ಮತ್ತು 1947ರಲ್ಲಿ ತನ್ನ ಆದ್ಯತೆಯನ್ನು ವ್ಯಕ್ತಪಡಿಸಿ ಗಾಂಧೀಜಿಯವರು ಮಾಡಿದ್ದ ಭಾಷಣವನ್ನು ಬೆಳಕಿಗೆ ತಂದಿದ್ದಾರೆ.
ದಲಿತರಾಗಿರುವ ಜಾರ್ಖಂಡ್ ರಾಜ್ಯಪಾಲೆ ದ್ರೌಪದಿ ಮುರ್ಮು ಮತ್ತು ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ರಾಷ್ಟ್ರಪತಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳಲ್ಲಿ ಸೇರಬಹುದು ಎಂಬ ಊಹಾಪೋಹಗಳ ನಡುವೆಯೇ ‘‘ಗಾಂಧಿ ಇನ್ನೂ ಏಕೆ ಪ್ರಸ್ತುತ: ಮಹಾತ್ಮಾರ ಪರಂಪರೆಯ ಒಂದು ವೌಲ್ಯಮಾಪನ’’ ಎಂಬ ಈ ಪುಸ್ತಕ ಹೊರಬಂದಿದೆ.
ಸೇವಾಗ್ರಾಮ ಆಶ್ರಮ ಸ್ಥಾಪನೆಗೊಂಡಾಗಿನಿಂದಲೂ ಗಾಂಧಿಯವರ ಜೊತೆಗಿದ್ದ ಆಂಧ್ರಪ್ರದೇಶದ ಪ್ರತಿಭಾವಂತ ದಲಿತ ಯುವಕ ಚಕ್ರಯ್ಯನವರ ನಿಧನದಿಂದಾಗಿ ಮೊದಲ ರಾಷ್ಟ್ರಪತಿಯಾಗಿ ದಲಿತ ಮಹಿಳೆಯನ್ನು ನೇಮಕಗೊಳಿಸುವ ಚಿಂತನೆ ಮೊಳಕೆಯೊಡೆದಿತ್ತು.
ಚಕ್ರಯ್ಯ ಸ್ಮರಣಾರ್ಥ 1947, ಜೂ.2ರಂದು ನಡೆದಿದ್ದ ಪ್ರಾರ್ಥನಾ ಸಭೆ ಯಲ್ಲಿ ಗಾಂಧಿ, ಚಕ್ರಯ್ಯ ಬದುಕಿದ್ದಿದ್ದರೆ ಉನ್ನತ ಹುದ್ದೆಗೆ ಅವರ ಹೆಸರನ್ನೇ ಮುಂದಿಡುತ್ತಿದ್ದೆ ಎಂದು ಹೇಳಿದ್ದರು. ನಾಲ್ಕು ದಿನಗಳ ಬಳಿಕ ರಾಜೇಂದ್ರ ಪ್ರಸಾದ್ ಜೊತೆ ಮಾತನಾಡುತ್ತಿದ್ದಾಗಲೂ ಗಾಂಧಿ ತನ್ನ ಚಿಂತನೆಯನ್ನು ಪುನರಾವರ್ತಿಸಿದ್ದರು. ಚಕ್ರಯ್ಯನಂತಹ ದಲಿತ ಅಥವಾ ದಲಿತ ಮಹಿಳೆ ದೇಶದ ಮೊದಲ ರಾಷ್ಟ್ರಪತಿಯಾಗಬೇಕು ಎಂದು ಹೇಳಿದ್ದರು. ಇದೇ ರಾಜೇಂದ್ರ ಪ್ರಸಾದ್ ಮುಂದೆ 1950, ಜ.26ರಂದು ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು. 1947, ಜೂ.27ರಂದು ಬಹಿರಂಗ ಭಾಷಣ ದಲ್ಲಿ ಯೂ ಗಾಂಧಿಯವರು ದಲಿತ ಮಹಿಳೆಯನ್ನು ಮೊದಲ ರಾಷ್ಟ್ರಪತಿ ಯನ್ನಾಗಿ ಮಾಡುವ ಬಗ್ಗೆ ಪ್ರಸ್ತಾವಿಸಿದ್ದರು. ಆದರೆ ಲಾರ್ಡ್ ವೌಂಟ್‌ಬ್ಯಾಟನ್‌ರನ್ನೇ ಗವರ್ನರ್ ಜನರಲ್ ಆಗಿ ಉಳಿಸಿಕೊಳ್ಳಲು ಬಯಸಿದ್ದ ಜವಾಹರ್‌ಲಾಲ್ ನೆಹರೂ, ವಲ್ಲಭಭಾಯಿ ಪಟೇಲ್ ಮತ್ತು ಕಂಪೆನಿಯು ಗಾಂಧಿಯವರ ತೀವ್ರಗಾಮಿ ಸಲಹೆಯನ್ನು ತಳ್ಳಿಹಾಕಿತ್ತು ಎಂದು ಪುಸ್ತಕವು ಹೇಳಿದೆ.