ನ್ಯಾ.ಕರ್ಣನ್ ಭಾರತದ ಗಡಿ ದಾಟಿರಬಹುದು: ನಿಕಟವರ್ತಿಯ ಹೇಳಿಕೆ
ಚೆನ್ನೈ,ಮೇ 11: ಕಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರಿಗಾಗಿ ಐವರು ಸದಸ್ಯರ ಕೋಲ್ಕತಾ ಪೊಲೀಸರ ತಂಡವೊಂದು ನಡೆಸುತ್ತಿರುವ ಹುಡುಕಾಟದ ನಡುವೆಯೇ ಅವರ ನಿಕಟವರ್ತಿ ಮತ್ತು ಕಾನೂನು ಸಲಹೆಗಾರ ಡಬ್ಲು ಪೀಟರ್ ರಮೇಶ ಕುಮಾರ್ ಅವರು, ನ್ಯಾ.ಕರ್ಣನ್ ಬಂಧನವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಮತ್ತು ದೇಶವನ್ನು ಬಿಟ್ಟು ತೆರಳಿರಬಹುದು. ರಾಷ್ಟ್ರಪತಿಯನ್ನು ಭೇಟಿಯಾಗಲು ಅವಕಾಶ ದೊರೆತರಷ್ಟೇ ಅವರು ದೇಶಕ್ಕೆ ವಾಪಸಾಗಬಹುದು ಎಂದು ಗುರುವಾರ ಇಲ್ಲಿ ತಿಳಿಸಿದರು. ನ್ಯಾಯಾಂಗ ನಿಂದನೆ ಅಪರಾಧಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನ್ಯಾ.ಕರ್ಣನ್‌ಗೆ ಆರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕಾಳಹಸ್ತಿಗೆ ಭೇಟಿ ನೀಡಲು ನ್ಯಾ.ಕರ್ಣನ್ ಅವರು ಬುಧವಾರ ಬೆಳಗ್ಗೆ ಚೆಪಾಕ್ ಸರಕಾರಿ ಅತಿಥಿಗೃಹದಿಂದ ನಿರ್ಗಮಿಸಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳು ಮತ್ತು ಚೆನ್ನೈ ಪೊಲೀಸರಿಗೆ ನೀಡಲಾಗಿತ್ತಾದರೂ ಅವರ ಸೆಲ್‌ಫೋನ್ ಮಾತ್ರ ಕಾಳಹಸ್ತಿಗೆ ಪ್ರಯಾಣಿಸಿತ್ತು ಮತ್ತು ನ್ಯಾ.ಕರ್ಣನ್ ಉತ್ತರದತ್ತ ಪ್ರಯಾಣಿಸಿದ್ದರು ಎಂದು ಕುಮಾರ್ ತಿಳಿಸಿದರು. ನ್ಯಾ.ಕರ್ಣನ್ ಭಾರತದ ಗಡಿ ದಾಟಿ ನೇಪಾಳ ಅಥವಾ ಬಾಂಗ್ಲಾದೇಶವನ್ನು ತಲುಪಿರಬಹುದು ಎಂದು ಕುಮಾರ್ ಹೇಳಿದರಾದರೂ, ಅವರು ಬಳಸಿದ ಮಾರ್ಗ ಅಥವಾ ಇತರ ವಿವರಗಳನ್ನು ನೀಡಲು ನಿರಾಕರಿಸಿದರು. ಚೆನ್ನೈನಿಂದ ರಸ್ತೆ ಮೂಲಕ ಭಾರತದ ಯಾವುದೇ ಗಡಿಯನ್ನು ತಲುಪಲು ಒಂದು ದಿನಕ್ಕೂ ಹೆಚ್ಚಿನ ಸಮಯ ಬೇಕಾಗುತ್ತದೆ.
ಕೋಲ್ಕತಾ ಪೊಲೀಸರ ತಂಡವು ನ್ಯಾ.ಕರ್ಣನ್ ಅವರ ಇರುವಿಕೆಯನ್ನು ಪತ್ತೆ ಹಚ್ಚಲು ಬುಧವಾರ ಸಂಜೆ ಚೆನ್ನೈನಿಂದ ಕಾಳಹಸ್ತಿಗೆ ಪ್ರಯಾಣಿಸಿತ್ತು. ಆದರೆ ನ್ಯಾ.ಕರ್ಣನ್‌ರನ್ನು ಪತ್ತೆ ಹಚ್ಚಲು ನೆರವು ನೀಡುವಲ್ಲಿ ಆಂಧ್ರ ಪ್ರದೇಶದ ಪೊಲೀಸರಿಗೆ ಸಾಧ್ಯವಾಗದ್ದರಿಂದ ಬರಿಗೈಯಲ್ಲಿ ಮರಳಿತ್ತು.
ನ್ಯಾ.ಕರ್ಣನ್ ಅವರು ಗುರುವಾರ ನಸುಕಿನಲ್ಲಿ ಭಾರತದ ಗಡಿಯನ್ನು ದಾಟಿರಬಹುದು. ಅವರು ರಸ್ತೆ ಮೂಲಕ ತೆರಳಿದ್ದಾರೆ. ತನ್ನನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಿದ್ದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ತನಗೆ ಭೇಟಿಗೆ ಅವಕಾಶವನ್ನು ನೀಡಿದರೆ ಮಾತ್ರ ಅವರು ಮರಳುತ್ತಾರೆ ಎಂದು ಕುಮಾರ್ ತಿಳಿಸಿದರು.
ತನಗೆ ನ್ಯಾಯ ದೊರೆಯುವವರೆಗೂ ನ್ಯಾ.ಕರ್ಣನ್ ಶರಣಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯದ ಆದೇಶದ ಕಾರ್ಯಾಚರಣೆಯ ಭಾಗವಷ್ಟೇ ಈಗ ಲಭ್ಯವಿದೆ. ಆದೇಶದ ವಿವರವಾದ ಪ್ರತಿ ಲಭ್ಯವಾಗುವವರೆಗೂ ತೀರ್ಪನ್ನು ವಿಶ್ಲೇಷಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರನ್ನು ನೇಮಕಗೊಳಿಸಿರುವುದು ರಾಷ್ಟ್ರಪತಿ ಮತ್ತು ಓರ್ವ ಉದ್ಯೋಗದಾತ ಮತ್ತು ಉದ್ಯೋಗಿಯಾಗಿ ಭೇಟಿಯಾಗಲು ಅವರಿಬ್ಬರಿಗೂ ಅವರದೇ ಆದ ಶಿಷ್ಟಾಚಾರಗಳಿವೆ. ಅಲ್ಲದೆ 20 ಹಿರಿಯ ನ್ಯಾಯಾಧೀಶರು ಮತ್ತು ಅವರ ಭ್ರಷ್ಟಾಚಾರಗಳ ವಿರುದ್ಧ ನ್ಯಾ.ಕರ್ಣನ್ ಸಲ್ಲಿಸಿರುವ ಅರ್ಜಿ ರಾಷ್ಟ್ರಪತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಬಿದ್ದುಕೊಂಡಿದೆ. ಅವರಿಗೆ ಜೈಲು ಶಿಕ್ಷೆ ವಿಧಿಸಲಾದಾಗ ಅವರ ಅರ್ಜಿಯ ಸ್ಥಿತಿ ಏನಾಗಿದೆ? ಅವರ ಅರ್ಜಿಯನ್ನು ಈವರೆಗೆ ತಿರಸ್ಕರಿಸಿಯೂ ಇಲ್ಲ. ಸ್ಪಷ್ಟ ಚಿತ್ರಣ ದೊರೆತ ಬಳಿಕ ನ್ಯಾ.ಕರ್ಣನ್ ಅವರು ಪುನರ್‌ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದ್ದಾರೆ. ವಿಚಾರಣೆಯಿಲ್ಲದೆ ಸರ್ವೋಚ್ಚ ನ್ಯಾಯಾಲಯವು ತನಗೆ ಶಿಕ್ಷೆ ವಿಧಿಸಿರುವುದರಿಂದ ತನಗಾಗಿ ಕೇಂದ್ರ ಸರಕಾರವು ಮೇಲ್ಮನವಿ ಸಲ್ಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ ಎಂದು ಕುಮಾರ್ ತಿಳಿಸಿದರು.
ಅಂದ ಹಾಗೆ ಸ್ವತಃ ಈ ಕುಮಾರ್ 2016,ಫೆಬ್ರವರಿಯಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯದ ಕೋರ್ಟ್ ಚೇಂಬರ್‌ಗೆ ನುಗ್ಗಿ ನ್ಯಾಯಾಲಯದ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದಕ್ಕಾಗಿ ಆರು ತಿಂಗಳ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಅವರನ್ನು ನ್ಯಾಯವಾದಿ ಹುದ್ದೆಯಿಂದ ಅನರ್ಹಗೊಳಿಸಲಾಗಿತ್ತಲ್ಲದೆ, 2,000 ರೂ.ದಂಡವನ್ನೂ ವಿಧಿಸಲಾಗಿತ್ತು.