ಶಾಲೆಯ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆ !

ಫರೀದಾಬಾದ್, ಮೆ 12: ಸರಕಾರಿ ಶಾಲೆಗಳ ಮಕ್ಕಳಿಗೆ ಒದಗಿಸಲಾಗುವ ಉಚಿತ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟದ ಬಗ್ಗೆ ಆಗೀಗ ಹಲವಾರು ಪ್ರಶ್ನೆಗಳು ಏಳುತ್ತಿರುವ ನಡುವೆಯೇ ಗುರುವಾರ ಫರೀದಾಬಾದ್ ನಗರದ ರಾಜ್ ಕೀಯ ಬಾಲಕಿಯರ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾದ ಬಿಸಿಯೂಟದಲ್ಲಿ ಹಾವಿನ ಮರಿಯೊಂದು ಪತ್ತೆಯಾಗಿದೆ.
ಕೂಡಲೇ ಮಕ್ಕಳಿಗೆ ಆಹಾರ ಸೇವಿಸದಂತೆ ಹೇಳಲಾಯಿತಾದರೂ ಅಷ್ಟೊತ್ತಿಗಾಗಲೇ ಹಲವು ವಿದ್ಯಾರ್ಥಿಗಳು ಸ್ವಲ್ಪ ಊಟ ಸೇವಿಸಿಯಾಗಿತ್ತು. ಅವರಲ್ಲಿ ಕೆಲವರು ಹಾವಿನಮರಿ ಇದ್ದ ವಿಷಯ ತಿಳಿಯುತ್ತಲೇ ವಾಂತಿ ಕೂಡ ಮಾಡಿದರು.
ಶಾಲೆಯ ಪ್ರಿನ್ಸಿಪಾಲ್ ಮತ್ತು ಇತರ ಶಿಕ್ಷಕರು ಆಹಾರದ ರುಚಿ ನೋಡುತ್ತಿದ್ದಾಗ ಅವರಿಗೆ ಪದಾರ್ಥದಲ್ಲಿ ಹಾವಿರುವುದು ಪತ್ತೆಯಾಗಿತ್ತು. ತಮಗೆ ನೀಡಲಾಗುವ ಊಟವು ಯಾವತ್ತೂ ಒಂದು ವಿಚಿತ್ರ ವಾಸನೆ ಹೊಂದಿತ್ತು ಎಂದು ವಿದ್ಯಾರ್ಥಿಗಳು ಹಿಂದೆಯೂ ದೂರುತ್ತಿದ್ದರೂ ಬುಧವಾರದ ಘಟನೆ ಅವರನ್ನು ಆಘಾತಕ್ಕೀಡು ಮಾಡಿದೆ.
ಘಟನೆಯ ಬಗ್ಗೆ ಮಾಹಿತಿಯನ್ನು ಶಾಲೆಗೆ ಬಿಸಿಯೂಟ ಪೂರೈಸುವ ಇಸ್ಕಾನ್ ಸಂಸ್ಥೆಗೆ ನೀಡಲಾಗಿದೆ. ಸಂಸ್ಥೆ ಆ ದಿನ ಆಹಾರ ಪೂರೈಸಿದ ಇತರ ಶಾಲೆಗಳಿಗೂ ಆಹಾರದಲ್ಲಿ ಹಾವಿನಮರಿ ಪತ್ತೆಯಾದ ವಿಚಾರವನ್ನು ಕೂಡಲೇ ತಿಳಿಸಲಾಯಿತು.