ನನ್ನನ್ನು ಮಾಮ ಎಂದು ಕರೆಯುತ್ತಿದ್ದವನು ನನ್ನ ಮಗನನ್ನು ಏಕೆ ಕೊಂದು ಬಿಟ್ಟ ?
ಹಿಂದೂ ರಾಷ್ಟ್ರೀಯ ಸೇನಾ ಮುಖಂಡನಿಂದ ಯುವಕನ ಬರ್ಬರ ಕೊಲೆ

ಭೋಪಾಲ್,ಮೇ 12 : ‘‘ಆತ ನನ್ನನ್ನು ಮಾಮ ಎಂದು ಕರೆಯುತ್ತಿದ್ದ. ಆ ದಿನ ಆತನಿಗೇನಾಯಿತೋ ಗೊತ್ತಿಲ್ಲ. ಆತನೇಕೆ ನನ್ನ ಮಗನನ್ನು ಅಷ್ಟೊಂದು ಬರ್ಬರವಾಗಿ ಕೊಂದು ಬಿಟ್ಟ ? ನನ್ನ ಮಗ ಯಾವತ್ತೂ ಆತನೊಡನೆ ಜಗಳವಾಡಿಲ್ಲ, ನಮ್ಮ ಕುಟುಂಬಗಳು ಕೂಡ,’’ ಎನ್ನುತ್ತಾರೆ ತನ್ನ ಮಗ ಅಬ್ದುಲ್ ಸಲ್ಮಾನ್(26)ನನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಅಬ್ದುಲ್ ಸಯೀದ್. ತಮ್ಮ ಮಗನನ್ನು ತಮ್ಮ ನೆರೆಮನೆಯ ನಿವಾಸಿ ಹಾಗೂ ಹಿಂದೂ ರಾಷ್ಟ್ರೀಯ ಸೇನೆಯ ಜಿಲ್ಲಾಧ್ಯಕ್ಷ ತಾನೆಂದು ಹೇಳಿಕೊಳ್ಳುತ್ತಿರುವ ಶಿವ ಪಾಟೀಲ್ ಕೊಂದಿದ್ದಾನೆಂಬುದರಲ್ಲಿ ಅವರಿಗೆ ಲವಲೇಶದ ಸಂಶಯವಿಲ್ಲ. ಸಲ್ಮಾನ್ ನ ಕುತ್ತಿಗೆ ಹಿಡಿದಿದ್ದ ವ್ಯಕ್ತಿಯೊಬ್ಬ ಇನ್ನೋವಾ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದುದನ್ನು ರವಿವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಅವರು ನೋಡಿದ್ದಾರೆ. ಸುಮಾರು 20 ಮೀಟರ್ ದೂರ ಹೋಗುವಷ್ಟರಲ್ಲಿ ಸಲ್ಮಾನ್ ನೆಲಕ್ಕೆ ಬಿದ್ದು ಬಿಟ್ಟಿದ್ದ ಹಾಗೂ ಆತನ ತಲೆ ಟ್ಯಾಂಕರ್ ಒಂದಕ್ಕೆ ಬಡಿದಿತ್ತು. ಆಗ ಇನ್ನೋವಾ ಚಲಾಯಿಸುತ್ತಿದ್ದ ವ್ಯಕ್ತಿ ತನ್ನ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗಿ ಸಲ್ಮಾನ್ ಮೇಲೆ ಹಾಯಿಸಿ ಆತನನ್ನು ಕೊಂದಿದ್ದಾನೆಂದು ಸಯೀದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಕುಟುಂಬ ಹಾಗೂ ತಮ್ಮ ಪಕ್ಕದ ಗುಡಿಸಲಿನಲ್ಲಿ ವಾಸವಾಗಿದ್ದ ಶಿವ ಅತನ ತಾಯಿ ಸುನೀತ ಹಾಗೂ ಸಹೋದರಿ ಆರತಿಯೊಂದಿಗೆ ತಮ್ಮ ಕುಟುಂಬ ಹಬೀಬ್ ಗಂಜ್ ಜೈನ ದೇವಳದ ಸಮೀಪದ ಶಾಂತಿನಗರ ಕೊಳಚೆಗೇರಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ವಾಸವಾಗಿತ್ತು ಎಂದು ಅವರು ಹೇಳುತ್ತಾರೆ.
ಆರೋಪಿ ಶಿವ ಈಗ ಜೈಲಿನಲ್ಲಿದ್ದಾನೆ. 21 ವರ್ಷದ ಆತನ ಮೇಲೆ ಕನಿಷ್ಠ ಅರ್ಧ ಡಜನ್ ಹಲ್ಲೆ ಹಾಗೂ ಬಲವಂತದ ವಸೂಲಿ ಪ್ರಕರಣಗಳಿವೆ.
ಸಲ್ಮಾನ್ ನನ್ನು ಎಳೆದುಕೊಂಡು ಹೋದ ಇನ್ನೋವಾ ವಾಹನದಲ್ಲಿ ಆತನ ಹೊರತಾಗಿ ಆತನ ಸಹೊದರ ಭರತ್, ಮೈದುನ ರಾಕಿ ಹಾಗೂ ಗೆಳೆಯ ಚೋಟು ಇದ್ದರೆನ್ನಲಾಗಿದ್ದು ವಾಹನವು ಆತನ ತಾಯಿ ಸುನೀತಾಳ ಹೆಸರಿನಲ್ಲಿ ನೋಂದಣಿಯಾಗಿತ್ತು. ಆರೋಪಿ ರಾಕಿಯನ್ನು ಕೂಡ ಬಂಧಿಸಲಾಗಿದೆ.
ಸಲ್ಮಾನ್ ತನ್ನ ವಾಹನದಲ್ಲಿ ತನ್ನ ಸಹೋದರಿಯ ಬಗ್ಗೆ ಆಕ್ಷೇಪಾರ್ಹವಾಗಿ ಏನನ್ನೋ ಬರೆದಿದ್ದನೆಂಬ ಕಾರಣಕ್ಕೆ ತಾನು ಆತನ ಮೇಲೆ ಹಲ್ಲೆ ನಡೆಸಿದ್ದಾಗಿ ವಿಚಾರಣೆಯ ವೇಳೆ ಶಿವ ತಿಳಿಸಿದ್ದನೆನ್ನಲಾಗಿದೆ. ಆದರೆ ಶಾಲೆಗೆ ಹೋಗಿದ್ದರೂ ತನ್ನ ಹೆಸರನ್ನು ಸರಿಯಾಗಿ ಬರೆಯಲು ತಿಳಿಯದ ಸಲ್ಮಾನ್ ಹೀಗೆಲ್ಲಾ ಬರೆದಿರಲಿಕ್ಕಿಲ್ಲ ಎಂದು ಆತನ ತಂದೆ ಹೇಳುತ್ತಾರೆ.
ಸಲ್ಮಾನ್ ಸಹೋದರ ಸೋಹೆಬ್ ಪ್ರಕಾರ ಆರೋಪಿಗಳು ಮೊದಲು ಆತನನ್ನು ದೂರಿ ಆತನ ತಲೆಗೆ ಕತ್ತಿಯಿಂದ ಹೊಡೆದಿದ್ದರು. ನಂತರ ಆತ ಶಾಲೆಗೆ ಯಾವತ್ತೂ ಹೋಗಿಲ್ಲ ಎಂದು ತಿಳಿದ ಮೇಲೆ ಸಲ್ಮಾನ್ ಮೇಲೆ ಆರೋಪ ಹೊರಿಸಿದ್ದರೆನ್ನಲಾಗಿದೆ.
ಸಲ್ಮಾನ್ ಮತ್ತಾತನ ತಂದೆ ಎರಡು ಸರಕು ಸಾಗಾಟ ವಾಹನಗಳನ್ನು ಓಡಿಸುತ್ತಿದ್ದರು.