ಎಟಿಎಂ ಮೂಲಕ ಹಣ ತೆಗೆಯುವುದಕ್ಕೆ ಶುಲ್ಕ:ಎಸ್‌ಬಿಐನಿಂದ ಸ್ಪಷ್ಟೀಕರಣ

ಹೊಸದಿಲ್ಲಿ,ಮೇ 12: ಎಟಿಎಂ ಮೂಲಕ ಹಣ ತೆಗೆಯುವುದಕ್ಕೆ ಶುಲ್ಕದಲ್ಲಿ ಉದ್ದೇಶಿತ ಏರಿಕೆಯು ತನ್ನ ಮೊಬೈಲ್ ವ್ಯಾಲೆಟ್ ‘ಸ್ಟೇಟ್ ಬ್ಯಾಂಕ ಬಡಿ’ಯ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಎಸ್‌ಬಿಐ ಸ್ಪಷ್ಟೀಕರಣ ನೀಡಿದೆ.
ಈ ಗ್ರಾಹಕರಿಗೆ ಎಟಿಎಂ ಶುಲ್ಕವನ್ನು ಜೂನ್ 1ರಿಂದ ಪ್ರತಿ ವಹಿವಾಟಿಗೆ 25 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ವಕ್ತಾರರೋರ್ವರು ತಿಳಿಸಿದರು.
ಉಳಿತಾಯ ಖಾತೆ
ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣವನ್ನು ಹಿಂದೆಗೆಯುವ ಉಚಿತ ಸೌಲಭ್ಯದ ಮಿತಿ ಬೇಸಿಕ್ ಉಳಿತಾಯ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ.
ಮಹಾನಗರಗಳಲ್ಲಿಯ ಸಾಮಾನ್ಯ ಉಳಿತಾಯ ಖಾತೆದಾರರು ತಿಂಗಳಿಗೆ ಎಂಟು ಬಾರಿ ಎಟಿಎಂ ಮೂಲಕ ಹಣ ತೆಗೆಯಬಹುದಾದ ಉಚಿತ ಸೌಲಭ್ಯ ಮುಂದುವರಿ ಯಲಿದೆ.ಎಸ್‌ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಮೂರು ವಹಿವಾಟುಗಳೂ ಇದರಲ್ಲಿ ಸೇರಿವೆ. ಇತರ ನಗರಗಳಲ್ಲಿ ಈ ಉಚಿತ ಸೌಲಭ್ಯವು ತಿಂಗಳಿಗೆ 10 ವಹಿವಾಟುಗಳಿಗೆ ಸೀಮಿತವಾಗಿದ್ದು, ಎಸ್‌ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಐದು ವಹಿವಾಟುಗಳೂ ಇದರಲ್ಲಿ ಸೇರಿವೆ. ಬ್ಯಾಂಕ್ ಶಾಖೆಗಳ ಮೂಲಕ ಹಣವನ್ನು ಹಿಂದೆಗೆಯುವ ವಹಿವಾಟು ಇದರಲ್ಲಿ ಒಳಗೊಂಡಿಲ್ಲ.
ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಮೂಲಕ 10,000 ರೂ.(100ರ ಗುಣಕಗಳಲ್ಲಿ) ವರೆಗಿನ ನಗದು ಠೇವಣಿಗೆ ಮೊತ್ತದ ಶೇ.0.25ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಕನಿಷ್ಠ 2 ರೂ. ಮತ್ತು ಗರಿಷ್ಠ 8 ರೂ.ಆಗಿರುತ್ತದೆ. ಜೊತೆಗೆ ಸೇವಾ ತೆರಿಗೆಯೂ ಅನ್ವಯವಾಗುತ್ತದೆ.
ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ಗಳ ಮೂಲಕ 2000 ರೂ.(100ರ ಗುಣಕಗಳಲ್ಲಿ) ವರೆಗಿನ ನಗದು ಹಿಂದೆಗೆತಕ್ಕೆ ಮೊತ್ತದ ಶೇ.2.50(ಕನಿಷ್ಠ 6 ರೂ.) ಶುಲ್ಕದ ಜೊತೆಗೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.
ಬೇಸಿಕ್ ಉಳಿತಾಯ ಖಾತೆಗಳಿಗೆ ಚೆಕ್‌ಬುಕ್,ಎಟಿಎಂ ಕಾರ್ಡ್ ವಿತರಣೆ ಮತ್ತು ಹಣ ಹಿಂದೆಗೆತದ ಮೇಲಿನ ಸೇವಾ ಶುಲ್ಕಗಳನ್ನೂ ಪರಿಷ್ಕರಿಸಲಾಗಿದೆ.
10 ಚೆಕ್‌ಗಳಿರುವ ಪುಸ್ತಕಕ್ಕೆ ಈ ಗ್ರಾಹಕರು 30 ರೂ.ಶುಲ್ಕ ಮತ್ತು ಸೇವಾ ತೆರಿಗೆ, 25 ಚೆಕ್‌ಗಳಿರುವ ಪುಸ್ತಕಕ್ಕೆ 75 ರೂ.ಶುಲ್ಕ ಮತ್ತು ಸೇವಾ ತೆರಿಗೆ ಹಾಗೂ 50 ಚೆಕ್‌ಗಳಿರುವ ಪುಸ್ತಕಕ್ಕೆ 150 ರೂ.ಶುಲ್ಕ ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಎಟಿಎಂ ಕಾರ್ಡ್‌ಗಳ ಪೈಕಿ ರುಪೇ ಕ್ಲಾಸಿಕ್ ಕಾರ್ಡ್‌ನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ.
ನೆಟ್ ವರ್ಗಾವಣೆ
ಪರಿಷ್ಕೃತ ಮಾರ್ಗಸೂಚಿಗಳಂತೆ ಎಟಿಎಂ ಮೂಲಕ ಹಣ ಹಿಂದೆಗೆತ ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿ ಹಣವನ್ನು ಉಚಿತವಾಗಿ ಹಿಂದೆಗೆದುಕೊಳ್ಳಬಹುದು. ಈ ಮಿತಿಯನ್ನು ದಾಟಿದರೆ ಬ್ಯಾಂಕ್ ಶಾಖೆಯಲ್ಲಿ ಪ್ರತಿ ವಹಿವಾಟಿಗೆ 50 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ;ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ಹಣ ಹಿಂದೆಗೆತಕ್ಕೆ ಪ್ರತಿ ವಹಿವಾಟಿಗೆ 20 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆ ಮತ್ತು ಎಸ್‌ಬಿಐ ಎಟಿಎಂಗಳ ಮೂಲಕ ಪ್ರತಿ ವಹಿವಾಟಿಗೆ 10 ರೂ.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.
ಇಂಟರ್ನೆಟ್ ಬ್ಯಾಂಕಿಂಗ್/ಯುಪಿಐ/ಯುಎಸ್‌ಎಸ್‌ಡಿ ಮೂಲಕ ಐಎಂಪಿಎಸ್ ಹಣ ವರ್ಗಾವಣೆ ಶುಲ್ಕ 1ಲ.ರೂ.ವರೆಗಿನ ಮೊತ್ತಕ್ಕೆ 5 ರೂ., 1ಲ.ರೂ.ನಿಂದ ಮೇಲ್ಪಟ್ಟು 2 ಲ.ರೂ.ವರೆಗೆ 15 ರೂ.ಮತ್ತು 2.ಲ.ರೂ.ಗಿಂತ ಮೇಲ್ಪಟ್ಟು 5 ಲ.ರೂ.ವರೆಗೆ 25 ರೂ.ಆರುತ್ತದೆ. ಜೊತೆಗೆ ಈ ಎಲ್ಲ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ವಿಧಿಸಲಾಗತ್ತದೆ.
ಹಾಳಾದ/ವಿರೂಪಗೊಂಡಿರುವ ನೋಟುಗಳ ಬದಲಾವಣೆಗೆ 20 ನೋಟುಗಳು ಮತ್ತು 5,000 ರೂ.ಮೌಲ್ಯದವರೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.
20 ಕ್ಕಿಂತ ಅಧಿಕ ನೋಟುಗಳಿದ್ದರೆ ಅಷ್ಟೂ ನೋಟುಗಳಿಗೆ ತಲಾ 2 ರೂ.ಸೇವಾಶುಲ್ಕ ಮತ್ತು ಸೇವಾತೆರಿಗೆಯನ್ನು ವಿಧಿಸಲಾಗುತ್ತದೆ. 5,000ರೂ.ಗಿಂತ ಹೆಚ್ಚಿನ ಮೌಲ್ಯದ ನೋಟುಗಳಿಗೆ ತಲಾ 2 ರೂ. ಅಥವಾ ಪ್ರತಿ ಸಾವಿರಕ್ಕೆ 5 ರೂ. ಮತ್ತು ಸೇವಾತೆರಿಗೆ...ಒಟ್ಟು ನೋಟುಗಳಿಗೆ ಈ ಪೈಕಿ ಯಾವುದು ಹೆಚ್ಚೋ ಅದನ್ನು ವಿಧಿಸಲಾಗುತ್ತದೆ.
ಉದಾಹರಣೆಗೆ 500 ರೂ.ಮುಖಬೆಲೆಯ 25 ನೋಟುಗಳಿದ್ದರೆ(ಮೌಲ್ಯ 12,500 ರೂ.),ಶುಲ್ಕವು ಪ್ರತಿ ನೋಟಿಗೆ 2 ರೂ.(ಒಟ್ಟು 50 ರೂ. ಮತ್ತು ಸೇವಾ ತೆರಿಗೆ) ಅಥವಾ ಪ್ರತಿ 1000 ರೂ.ಗೆ 5 ರೂ.(62.50 ರೂ.ಮತ್ತು ಸೇವಾತೆರಿಗೆ) ಆಗುತ್ತದೆ. ಗ್ರಾಹಕನಿಗೆ 62.50 ರೂ.ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.