ನ್ಯಾಶನಲ್ ಹೆರಾಲ್ಡ್ ಪ್ರಕರಣ: ಸೋನಿಯಾ,ರಾಹುಲ್ ವಿರುದ್ಧ ಐಟಿ ತನಿಖೆಗೆ ಹೈಕೋರ್ಟ್ ಆದೇಶ
ಹೊಸದಿಲ್ಲಿ, ಮೇ 12: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟ್ ಶುಕ್ರವಾರ ಒಪ್ಪಿಗೆ ನೀಡಿದೆ.
ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಕಂಪೆನಿಯ ಹಣವನ್ನು ಕಾಂಗ್ರೆಸ್ ಪಕ್ಷ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಖಾತೆಗಳ ವಿವರ ಹಾಗೂ ತೆರಿಗೆ ಪಾವತಿಯ ದಾಖಲೆ ಕೋರಿ ಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪಟಿಯಾಲ ನ್ಯಾಯಾಲಯ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ನೋಟಿಸ್‌ವೊಂದನ್ನು ಜಾರಿ ಮಾಡಿತ್ತು. ಮಾತ್ರವಲ್ಲ ಹಣಕಾಸು ಸಚಿವಾಲಯ, ಆದಾಯ ತೆರಿಗೆ ಇಲಾಖೆ ಮತ್ತಿತರ ಸಂಸ್ಥೆಗಳು ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನೊಟೀಸ್‌ನಲ್ಲಿ ತಿಳಿಸಿತ್ತು.
ಪಟಿಯಾಲ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸೋನಿಯಾ ಅವರು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ , ಪಟಿಯಾಲ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಲು ಸೂಚನೆ ನೀಡಿದೆ. ವಿಚಾರಣೆ ವೇಳೆ ಸೋನಿಯಾ-ರಾಹುಲ್ ಗಾಂಧಿಯವರಲ್ಲದೆ ಕಂಪೆನಿಯೊಂದಿಗೆ ಪಾಲುದಾರಿಕೆ ಹೊಂದಿರುವವರನ್ನು ವಿಚಾರಣೆಗೊಳಪಡಿಸುವಂತೆ ಕೋರ್ಟ್ ಆದೇಶಿಸಿದೆ.