ಎಐಟಿ ವಿದ್ಯಾರ್ಥಿಗಳ ಸಾಧನೆ: ಮೀನಿನ ತ್ಯಾಜ್ಯದಿಂದ ಬಯೋಡೀಸೆಲ್ ಉತ್ಪಾದನೆ

ಚಿಕ್ಕಮಗಳೂರು, ಮೇ.12: ಸಮೂಹ ಸಂಪನ್ಮೂಲಗಳ ಮಿಥವ್ಯಯದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಹೊಸ ಹೊಸ ಸಂಪನ್ಮೂಲಗಳ ಹುಡುಕಾಟ ದಿನ ನಿತ್ಯ ನಡೆಯುತ್ತಲಿವೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಾದ ಪ್ರವೀಣ.ಎಚ್.ಟಿ, ಮೋಹನ್.ವೈ.ವಿ, ನಿತಿನ್ ಚಂದಾವರ್ ಮತ್ತು ಪ್ರಜ್ವಲ್ ಸಿ.ಅರ್. ಅಧ್ಯಾಪಕ ಸುಚಿತ್ ಕುಮಾರ್.ಎವ್.ಟಿ ರವರ ಮಾರ್ಗದರ್ಶನದಲ್ಲಿ ಹೊಸ ಆವಿಷ್ಕಾರಕ್ಕೆ ಮುನ್ನುಡಿ ಬರೆದಿದ್ದಾರೆ.
ಮೀನಿನ ತ್ಯಾಜ್ಯವನ್ನು ಉಪಯೋಗಿಸಿ ಬಯೋ ಡೀಸೆಲ್ ತಯಾರು ಮಾಡಿದ್ದಾರೆ. ಚಿಕ್ಕಮಗಳೂರಿನ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ತ್ಯಾಜ್ಯ ಉಪಯೋಗಿಸಿ ಡೀಸೆಲ್ ಉತ್ಪಾದಿಸಿದ್ದು ಈ ಬಯೋಡೀಸೆಲ್ ಗುಣ ಲಕ್ಷಣಗಳು ಸಾಮನ್ಯ ಡೀಸೆಲ್‌ಗೆ ಹೋಲಿಕೆ ಕಂಡು ಬರುತ್ತಿದೆ. ದಿನವೊಂದಕ್ಕೆ ಸುಮಾರು 800-900 ಕೆ.ಜಿ. ತ್ಯಾಜ್ಯ ದೊರಕುತ್ತಿದ್ದು, ಈ ತ್ಯಾಜ್ಯದ ಸಂಪೂರ್ಣ ಉಪಯೋಗವಾಗುತ್ತಿಲ್ಲ. ಇದರಿಂದಾಗಿ ಹೂಸ ಆವಿಷ್ಕಾರಕ್ಕೆ ಹೊರಟ ವಿದ್ಯಾರ್ಥಿಗಳು ಡೀಸೆಲ್ ಉತ್ಪಾದನೆ ಮಾಡಿದ್ದು ಇದು ಮುಂದಿನ ಪೀಳಿಗೆಯ ಸಂಪನ್ಮೂಲವಾಗುದರಲ್ಲಿ ಯಾವೂದೇ ಸಂಶಯವಿಲ್ಲ.
ಈ ಆವಿಷ್ಕಾರವನ್ನು ಸಂಪೂರ್ಣವಾಗಿ ಜಾರಿಗೆ ತಂದಲ್ಲಿ ತೈಲಗಳ ಆಮದು ಕಡಿಮೆಯಾಗುತ್ತದೆ. ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಮೀನಿನ ತ್ಯಾಜ್ಯದಲ್ಲಿ ಡೀಸೆಲ್ ಜೊತೆಗೆ ಗ್ಲಿಸರಿನ್ ಕೂಡ ದೊರಕುತ್ತಿದ್ದು ಇದನ್ನು ಸಾಬೂನು ತಯಾರಿಕೆಯಲ್ಲಿ ಉಪಯೋಗಿಸಬಹುದು. ಒಂದು ಲೀಟರ್ ಬಯೋಡೀಸೆಲ್‌ಗೆ 50-60 ರೂ ಬೆಲೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಕಸ ದಿಂದ ರಸ ಎಂಬ ನಾಣ್ಣುಡಿಗೆ ಸಂಪೂರ್ಣ ಅರ್ಥ ನೀಡಿದ್ದು, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ವಿದ್ಯಾರ್ಥಿಗಳ ಈ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.







