ಶಿವಮೊಗ್ಗ: ಡಿ.ಸಿ. ದಿಢೀರ್ ಭೇಟಿ; 10 ನ್ಯಾಯಬೆಲೆ ಅಂಗಡಿಗಳಿಗೆ ಶೋಕಾಸ್ ನೋಟಿಸ್

ಶಿವಮೊಗ್ಗ, ಮೇ 12: ಸರ್ಕಾರಿ ಕಚೇರಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ದಿಢೀರ್ ಭೇಟಿ ನೀಡಿ ಲೋಪದೋಷ ಪತ್ತೆ ಹಚ್ಚಿ ತಪ್ಪಿಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಂಡ ಘಟನೆ ಶುಕ್ರವಾರ ಶಿವಮೊಗ್ಗದಲ್ಲಿ ನಡೆಯಿತು.
ಈ ವೇಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಹಲವು ನ್ಯಾಯಬೆಲೆ ಅಂಗಡಿಗಳು ಬಾಗಿಲು ಮುಚ್ಚಿದ್ದುವು. ಕೆಲವೆಡೆ ಸ್ವತಃ ಜಿಲ್ಲಾಧಿಕಾರಿ ಅಂಗಡಿಗಳ ಮಾಲಕರನ್ನು ಕರೆಯಿಸಿ ಬಾಗಿಲು ತೆರೆಯಿಸಿದ್ದಾರೆ. ನಿಗದಿತ ಸಮಯಕ್ಕೆ ಬಾಗಿಲು ತೆರೆಯದ 10 ಪಡಿತರ ಕೇಂದ್ರಗಳ ಮಾಲಕರ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸಿ, 24 ಗಂಟೆಯೊಳಗೆ ವರದಿ ನೀಡುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಾಲಮಿತಿಯಲ್ಲಿ ಆಹಾರ ಧಾನ್ಯ ಎತ್ತುವಳಿ ಮಾಡಿ ಗ್ರಾಹಕರಿಗೆ ವಿತರಣೆ ಮಾಡುವಲ್ಲಿಯು ಲೋಪ ಎಸಗಿದ ಪಡಿತರ ಕೇಂದ್ರಗಳಿಂದಲೂ ಮಾಹಿತಿ ಸಂಗ್ರಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8 ಗಂಟೆಯಿಂದ 12 ಹಾಗೂ ಸಂಜೆ 4 ರಿಂದ 8 ಗಂಟೆಯವರೆಗೆ ಬಾಗಿಲು ತೆರೆಯಬೇಕು. ವಾರದಲ್ಲಿ ಮಂಗಳವಾರ ಹಾಗೂ ಸರ್ಕಾರಿ ರಜೆ ದಿನಗಳಂದು ಬಾಗಿಲು ಮುಚ್ಚಲು ಅವಕಾಶವಿದೆ.
ಶಿವಮೊಗ್ಗ ನಗರದ ಹಲವು ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯಕ್ಕೆ ಬಾಗಿಲು ತೆರೆಯದಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸಿ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಶಿವಮೊಗ್ಗದ ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿದ್ದರು.
ಅಂಗಡಿ ಮಾಲಕರಲ್ಲಿ ಸಂಚಲನ..!
ಶಿವಮೊಗ್ಗ ನಗರದ ಪಡಿತರ ಕೇಂದ್ರಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದ ಬಗ್ಗೆ ಪಡಿತರ ಕೇಂದ್ರಗಳ ಮಾಲಕರಲ್ಲಿ ಸಂಚಲನ ಮೂಡಿ ಸಿತ್ತು. ಡಿ.ಸಿ. ದಿಢೀರ್ ಬೇಟಿ ನೀಡುತ್ತಿರುವ ಮಾಹಿತಿ ಅರಿತ ಕೆಲ ಅಂಗಡಿಗಳ ಮಾಲಕರು ಎಲ್ಲಿ ತಮ್ಮ ಅಂಗಡಿಗಳಿಗೂ ಆಗಮಿಸುತ್ತಾರೋ ಎಂಬ ಆತಂಕದಿಂದ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತ್ತು.
ಈ ಸಂದರ್ಭ ಆಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಲಕ್ಷ್ಮೀ ನಾರಾಯಣ ರೆಡ್ಡಿ ಉಪಸ್ಥಿತರಿದ್ದರು.







