ಬ್ರೂಸ್ಲಿ ಬಯೋಪಿಕ್ ಚಿತ್ರಕ್ಕೆ ಶೇಖರ್ ಕಪೂರ್ ನಿರ್ದೇಶಕ

ಹಾಲಿವುಡ್ ಚಿತ್ರರಂಗದ ದಂತಕತೆ ಬ್ರೂಸ್ಲಿಯ ಬದುಕು ಶೀಘ್ರದಲ್ಲೇ ಬೆಳ್ಳಿಪರದೆಯಲ್ಲಿ ಮೂಡಿಬರಲಿದೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಶೇಖರ್ ಕಪೂರ್ ಅವರು ಆ್ಯಕ್ಷನ್ ಹೀರೋ ಬ್ರೂಸ್ಲಿಯ ಕುರಿತಾದ ಬಯೋಪಿಕ್ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.
‘ಲಿಟ್ಲ್ ಡ್ರಾಗನ್’ ಎಂದು ಹೆಸರಿಡಲಾದ ಈ ಚಿತ್ರದಲ್ಲಿ ಬ್ರೂಸ್ಲಿಯ ಬದುಕಿನ ಆರಂಭಿಕ ದಿನಗಳನ್ನು ಅವರು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ಪ್ರಾಚೀನ ಸಮರಕಲೆ ಕರಾಟೆಯನ್ನು ಜಗತ್ತಿಗೆ ಪರಿಚಯಿಸಿದ ಬ್ರೂಸ್ಲಿಯ ಪ್ರಣಯ,ನೋವು, ನಲಿವಿನ ಸನ್ನಿವೇಶಗಳನ್ನು ತೆರೆಯಲ್ಲಿ ಅನಾವರಣಗೊಳಿಸುವುದಾಗಿ ಶೇಖರ್ ಕಪೂರ್ ಹೇಳಿದ್ದಾರೆ.
‘ಎಂಟರ್ ದಿ ಡ್ರಾಗನ್’, ‘ರಿಟರ್ನ್ ಆಫ್ ದಿ ಡ್ರಾಗನ್’ ಇತ್ಯಾದಿ ಆ್ಯಕ್ಷನ್ ಚಿತ್ರಗಳ ಮೂಲಕ ವಿಶ್ವದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರು.ಅಂದಹಾಗೆ ಶೇಖರ್ ಕಪೂರ್ ಈ ಮೊದಲು ಬ್ರಿಟಿಷ್ ರಾಣಿ ಎಲಿಜಬೆತ್ ಬದುಕಿನ ಚಿತ್ರವನ್ನು ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದರು.
ಚೀನಿ ನಿರ್ಮಾಪಕರು ಹಣ ಹೂಡಿರುವ ಲಿಟ್ಲ್ ಡ್ರಾಗನ್‌ನಲ್ಲಿ ಬ್ರೂಸ್ಲಿಯ ಪಾತ್ರದಲ್ಲಿ ನಟಿಸಲು ಯೋಗ್ಯ ನಟನಿಗಾಗಿ ಶೇಖರ್ ಕಪೂರ್ ತಲಾಶ್ ನಡೆಸುತ್ತಿದ್ದಾರೆ. ಅಂದ ಹಾಗೆ ಬ್ರೂಸ್ಲಿಯ ಪುತ್ರಿ ಶಾನೊನ್ ಲಿ ಈ ಚಿತ್ರಕ್ಕೆ ಕಥೆಯನ್ನು ಬರೆದಿದ್ದಾರೆ.