ಮುಂಬೈ: ಮಾಯವಾಗುತ್ತಿರುವ ನೋಟು ರದ್ದತಿ ಪರಿಣಾಮ, ಮತ್ತೆ ತಲೆ ಎತ್ತುತ್ತಿದೆ ವಿದೇಶಿ ಕರೆನ್ಸಿ ಕಳ್ಳಸಾಗಾಣಿಕೆ ದಂಧೆ

ಮುಂಬೈ,ಮೇ 12: ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ 15 ದಿನಗಳಲ್ಲಿ ವಿದೇಶಿ ಕರೆನ್ಸಿಯನ್ನು ವಿದೇಶಗಳಿಗೆ ಕಳ್ಳ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ಮೂವರು ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇತ್ತೀಚಿಗೆ ಇಂತಹ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ನೋಟು ರದ್ದತಿಯ ಬಳಿಕ ನಗದು ಹಣದ ಕೊರತೆ ಎದುರಿಸುತ್ತಿದ್ದ ಕಳ್ಳಸಾಗಾಣಿಕೆದಾರರು ತಮ್ಮ ಚಟುವಟಿಕೆಗಳನ್ನು ಮತ್ತೆ ಚುರುಕುಗೊಳಿಸಿದ್ದಾರೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಈ ಅಕ್ರಮ ಹಣವನ್ನು ವಿದೇಶಗಳಿಗೆ ಸಾಗಿಸಿ ಅಲ್ಲಿ ಚಿನ್ನ ಖರೀದಿಗೆ ಬಳಸಲಾಗುತ್ತದೆ ಮತ್ತು ಅದನ್ನು ಭಾರತಕ್ಕೆ ಮರಳಿ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಹೀಗಾಗಿ ಕರೆನ್ಸಿ ಕಳ್ಳಸಾಗಾಣಿಕೆಯನ್ನು ತಡೆಯಲು ವಾಯು ಗುಪ್ತಚರ ಘಟಕ (ಏಐಯು)ದ ಅಧಿಕಾರಿ ಗಳು ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣನ್ನಿಟ್ಟಿದ್ದಾರೆ. ವಿದೇಶಕ್ಕೆ ತೆರಳುವ ಪ್ರಯಾಣಿಕರು ಮಾನ್ಯತೆ ಪಡೆದಿರುವ ಮತ್ತು ನೋಂದಾಯಿತ ವಿದೇಶಿ ವಿನಿಮಯ ಡೀಲರ್ ಬಳಿಯಿಂದ ಕರೆನ್ಸಿಯನ್ನು ವಿನಿಮಯ ಮಾಡಿಕೊಂಡಿದ್ದರೆ ಮಾತ್ರ ಅವರು ವಿದೇಶಿ ಕರೆನ್ಸಿಯನ್ನು ದೇಶದಿಂದ ಹೊರಕ್ಕೊಯ್ಯಲು ಅವಕಾಶ ನೀಡಲಾಗುತ್ತದೆ.