9 ದಿನಗಳಲ್ಲಿ 1 ಸಾವಿರ ಕೋಟಿ ರೂ.
ಬಾಹುಬಲಿ-2 ಹೊಸ ಇತಿಹಾಸ
ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಜಯಭೇರಿ ಬಾರಿಸುತ್ತಿರುವ ಬಾಹುಬಲಿ-2, ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಬಿಡುಗಡೆಯಾದ ಕೇವಲ 9 ದಿನಗಳಲ್ಲಿ 1 ಸಾವಿರ ಕೋಟಿ ರೂ. ಗಳಿಸುವ ಮೂಲಕ ಹಿಂದಿನ ಎಲ್ಲಾ ಭಾರತೀಯ ಚಿತ್ರಗಳ ದಾಖಲೆಗಳನ್ನು ಅದು ಮುರಿದಿದೆ.
1 ಸಾವಿರ ಕೋಟಿ ರೂ. ಸಂಪಾದಿಸಿದ ಪ್ರಪ್ರಥಮ ಭಾರತೀಯ ಚಿತ್ರವೆಂಬ ಹೆಗ್ಗಳಿಕೆಯನ್ನೂ ಬಾಹುಬಲಿ-2 ತನ್ನದಾಗಿಸಿಕೊಂಡಿದೆ. ಈ ತನಕ 792 ಕೋಟಿ ರೂ. ಗಳಿಸಿದ್ದ ಆಮಿರ್ ಖಾನ್ ಅಭಿನಯದ ಪಿಕೆ, ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರವೆಂಬ ದಾಖಲೆಯನ್ನು ಹೊಂದಿತ್ತು. ಇದೀಗ ‘ಬಾಹುಬಲಿ-2’ ಆ ದಾಖಲೆಯನ್ನು ಹಿಂದಿಕ್ಕಿದೆತೆಲುಗಿನಲ್ಲಿ ನಿರ್ಮಾಣಗೊಂಡು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿದ್ದ ಬಾಹುಬಲಿಗೆ, ದೇಶಾದ್ಯಂತ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
ಬಾಹುಬಲಿಯ ಹಿಂದಿ ಆವೃತ್ತಿಯೊಂದೇ ಕೇವಲ ಏಳು ದಿನಗಳಲ್ಲಿ 245 ಕೋಟಿ ರೂ. ಸಂಪಾದಿಸಿದೆ. ಸಲ್ಮಾನ್ ಖಾನ್ ಅಭಿನಯದ ‘ಸುಲ್ತಾನ್-2’ ಮೊದಲ ವಾರದಲ್ಲಿ 208.99 ಕೋಟಿ ಸಂಪಾದಿಸಿ, ಹೊಸ ದಾಖಲೆಯನ್ನು ಸ್ಥಾಪಿಸಿತ್ತು. ಆದರೆ ಇದೀಗ ಬಾಹುಬಲಿ 2 ಆ ದಾಖಲೆಯನ್ನು ಕೂಡಾ ಅನಾಯಾಸವಾಗಿ ಮುರಿದಿದೆ. ಈ ಮಧ್ಯೆ ‘ಬಾಹುಬಲಿ-2’ಯ ನಾಯಕ ಪ್ರಭಾಸ್ ಅವರು ಚಿತ್ರದ ಅಭೂತಪೂರ್ವ ಯಶಸ್ಸಿಗಾಗಿ ಪ್ರೇಕ್ಷಕರು ಹಾಗೂ ತನ್ನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ, ಟ್ವೀಟ್ ಮಾಡಿದ್ದಾರೆ.
ರಾಜಾವೌಳಿ ನಿರ್ದೇಶನದ ‘ಬಾಹುಬಲಿ-2’ನಲ್ಲಿ ಅನುಷ್ಕಾ ಶೆಟ್ಟಿ, ರಾಣಾದುಗ್ಗು ಬಾಟಿ,ತಮನ್ನಾ, ರಮ್ಯಕೃಷ್ಣ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ ‘ಬಾಹುಬಲಿ-3’ ನಿರ್ಮಾಣವಾಗಲಿದೆಯೆಂಬ ವದಂತಿಗಳು ಹಬ್ಬಿದೆಯಾದರೂ, ನಿರ್ದೇಶಕ ರಾಜಾವೌಳಿ ಮಾತ್ರ ಈ ಬಗ್ಗೆ ಮೌನ ತಾಳಿದ್ದಾರೆ.