99.52 ಅಂಕ ಗಳಿಸಿದ ರಿಕ್ಷಾ ಚಾಲಕನ ಪುತ್ರಿ ಫರ್ಹಾನ
ಹನ್ನೆರಡನೇ ತರಗತಿ ವಿಜ್ಞಾನ ವಿಭಾಗ

ಅಹ್ಮದಾಬಾದ್ , ಮೇ 12 : ಇಲ್ಲಿನ ರಿಕ್ಷಾ ಚಾಲಕನ ಪುತ್ರಿ ಫರ್ಹಾನ ಬವನಿ ಹನ್ನೆರಡನೇ ತರಗತಿಯ ವಿಜ್ಞಾನ ವಿಭಾಗದಲ್ಲಿ 99.52 ಪರ್ಸೆಂಟೈಲ್ ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಎಂ ಬಿ ಬಿ ಎಸ್ ಗೆ ಸೇರಿ ಮುಂದೆ ಹೃದಯ ತಜ್ಞೆಯಾಗುವ ಗುರಿ ಫರ್ಹಾನ ಳದ್ದು.
ಅಹ್ಮದಾಬಾದ್ ನ ಬೈರಂಜೀ ಜೀಜೀ ಬೊಯ್ ಮೆಡಿಕಲ್ ಕಾಲೇಜಿಗೆ ದಾಖಲಾತಿ ಪಡೆಯುವುದು ಆಕೆಯ ಹೆಬ್ಬಯಕೆ. ಅಲ್ಲಿ ಸೇರಿದರೆ ಮನೆಯಿಂದ ಹೋಗಿ ಬರುವುದೂ ಸುಲಭ ಎಂಬುದು ಆಕೆಯ ಅಭಿಪ್ರಾಯ. ಆದರೆ ನೀಟ್ ಪರೀಕ್ಷೆ ಬರೆದಿರುವ ಫರ್ಹಾನ ಗೆ ಈಗ ಭಯ ಆವರಿಸಿದೆ. " ನೀಟ್ ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ಅನುವಾದ ತಪ್ಪುಗಳಿದ್ದವು. ಇದರಿಂದಾಗಿ ನನಗೆ ಕೆಲವು ಪ್ರಶ್ನೆಗಳು ಅರ್ಥವಾಗಲಿಲ್ಲ. ಹಾಗಾಗಿ ನಿರೀಕ್ಷಿತ ಫಲಿತಾಂಶ ಬರಲಾರದು ಎಂಬ ಭಯವಿದೆ. ಇದರಿಂದಾಗಿ ನನಗೆ ಎಂ ಬಿ ಬಿ ಎಸ್ ಗೆ ದಾಖಲಾತಿ ಸಿಗುತ್ತದೋ ಇಲ್ಲವೋ ಗೊತ್ತಾಗುತ್ತಿಲ್ಲ " ಎಂದು ಫರ್ಹಾನ ಹೇಳಿದ್ದಾರೆ.
ಸೀಮಿತ ಆದಾಯದ ಹೊರತಾಗಿಯೂ ಫರ್ಹಾನರಿಗೆ ಅವರ ಮನೆಯಲ್ಲಿ ತುಂಬು ಪ್ರೋತ್ಸಾಹ ಸಿಕ್ಕಿದೆ. ಪುಟ್ಟ ಮನೆಯಲ್ಲೂ ಆಕೆಗೆ ಕಲಿಕೆಗೆ ತೊಂದರೆಯಾಗದಂತೆ ಪ್ರತ್ಯೇಕ ಕೋಣೆ ಮಾಡಿಕೊಟ್ಟಿದ್ದರು. ಪ್ರತಿದಿನ 5-6 ಗಂಟೆ ಓದುತ್ತಿದ್ದ ಫರ್ಹಾನ ಪರೀಕ್ಷೆ ಹತ್ತಿರ ಬರುವಾಗ ದಿನಕ್ಕೆ 10 ಗಂಟೆವರೆಗೂ ಓದುತ್ತಿದ್ದರು. " ನನಗೆ ನನ್ನ ಕುಟುಂಬದಿಂದ ಎಲ್ಲ ರೀತಿಯಲ್ಲೂ ಪೂರ್ಣ ಸಹಕಾರ ಸಿಕ್ಕಿದೆ. ಶಿಸ್ತುಬದ್ಧ ಅಧ್ಯಯನ ಬಹಳ ಮುಖ್ಯ . ಜೊತೆಗೆ ಮನಸ್ಸಿಗೆ , ದೇಹಕ್ಕೆ ವಿರಾಮವೂ ಬೇಕು " ಎನ್ನುತ್ತಾರೆ ಫರ್ಹಾನ.