ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆ ಮಾಡಿದ ಆಯಿಷಾ, ವಸಂತ್

ಉಡುಪಿ, ಮೇ 12: ಹುಟ್ಟು ವಿಕಲಚೇತನರಾದ ಗಂಗೊಳ್ಳಿಯ ಆಯಿಷಾ ರಾಹೀನ್ ಹಾಗೂ ಮೊಳಹಳ್ಳಿಯ ವಸಂತ್ ಕುಲಾಲ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.
ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಆಯಿಷಾ ರಾಹೀನ್ ಗಂಗೊಳ್ಳಿ ಮುಹಮ್ಮದ್ ಶಬ್ಬಾರ್ ಹಾಗೂ ರಹಿಬೀನ್ ದಂಪತಿಯ ಪುತ್ರಿ. ಈಕೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 549(ಶೇ.87.08) ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ಉರ್ದುವಿನಲ್ಲಿ 112, ಕನ್ನಡದಲ್ಲಿ 81, ಇಂಗ್ಲಿಷ್‌ನಲ್ಲಿ 95, ವಿಜ್ಞಾನದಲ್ಲಿ 80, ಗಣಿತದಲ್ಲಿ 91, ಸಮಾಜ ವಿಜ್ಞಾನದಲ್ಲಿ 90 ಅಂಕ ಗಳಿಸಿದ್ದಾರೆ.
‘ಹುಟ್ಟಿನಿಂದ ತನ್ನ ಎರಡು ಕಾಲುಗಳ ಬಲ ಕಳೆದುಕೊಂಡಿರುವ ಈಕೆಗೆ ಹೆಚ್ಚು ನಡೆಯಲು ಆಗುವುದಿಲ್ಲ. ಮೆಟ್ಟಿಲಿನಲ್ಲಿ ಹಾಗೂ ಹೆಚ್ಚು ದೂರ ನಡೆದರೆ ಕಾಲುಗಳು ನೋಯುತ್ತವೆ. ಕೈ ಕೂಡ ವೈಕಲ್ಯಕ್ಕೆ ಗುರಿಯಾಗಿದೆ. ಆದರೂ ಪ್ರತಿದಿನ ರಿಕ್ಷಾದಲ್ಲಿ ಶಾಲೆಗೆ ಹೋಗಿ ಶ್ರದ್ಧೆಯಿಂದ ಓದುತ್ತಾಳೆ. ಯಾವುದೇ ಟ್ಯೂಷನ್ ಗೆ ಹೋಗದೆ ಮನೆಯಲ್ಲಿ ಪ್ರತಿದಿನ 4 ಗಂಟೆಗಳ ಕಾಲ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಾಳೆ’ ಎನ್ನುತ್ತಾರೆ ಆಕೆಯ ಪೋಷಕರು.
‘ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಪಡೆದು ಎಂಬಿಬಿಎಸ್ ಮಾಡ ಬೇಕೆಂಬ ಗುರಿ ಹೊಂದಿದ್ದೇನೆ. ಇದಕ್ಕೆ ನನ್ನ ಮನೆಯವರು ತುಂಬಾ ಪ್ರೋತ್ಸಾಹ ನೀಡುತ್ತಾರೆ’ ಎಂದು ಆಯಿಷಾ ರಾಹೀನ್ ಹೇಳುತ್ತಾರೆ.
ಮೊಳಹಳ್ಳಿಯ ವಸಂತ: ಹುಟ್ಟಿನಿಂದ ವಿಕಲಚೇತನರಾಗಿರುವ ವಸಂತ ಕುಲಾಲ್‌ಗೆ ಸೊಂಟದ ಕೆಳಗಿನಿಂದ ಬಲವಿಲ್ಲ. ನೆಲದಲ್ಲಿ ತನ್ನ ಕೈಗಳ ಸಹಾಯದಿಂದ ತೆವಳಿಕೊಂಡೇ ಹೋಗುತ್ತಾರೆ. ಆದರೆ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಲು ಈ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 66, ಇಂಗ್ಲಿಷ್ ನಲ್ಲಿ 61, ಹಿಂದಿಯಲ್ಲಿ 52, ಗಣಿತದಲ್ಲಿ 54, ವಿಜ್ಞಾನದಲ್ಲಿ 56 ಹಾಗೂ ಸಮಾಜ ವಿಜ್ಞಾನದಲ್ಲಿ 62 ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ವಸಂತ ಕುಲಾಲ್ ಮೊಳಹಳ್ಳಿಯ ರಾಮ ಕುಲಾಲ್ ಹಾಗೂ ಸರೋಜಾ ದಂಪತಿಯ ಪುತ್ರ. ರಾಮ ಕುಲಾಲ್ ಕೂಲಿ ಕೆಲಸ ಮಾಡಿಕೊಂಡಿದ್ದು, ಇವರದ್ದು ಬಡತನದ ಜೀವನ. ಆದರೂ ಇತರರಂತೆ ತಾನೂ ಕಲಿಯಬೇಕೆಂಬ ಆಸೆ ಹಾಗೂ ಛಲದಿಂದ ವಸಂತ ಎರಡು ಕಿ.ಮೀ. ದೂರದ ಶಾಲೆಗೆ ರಿಕ್ಷಾದಲ್ಲಿ ಹೋಗಿ ಈ ಸಾಧನೆ ಮಾಡಿದ್ದಾರೆ.
'ಶಾಲೆಗೆ ಹೋಗುವುದೆಂದರೆ ನನಗೆ ತುಂಬಾ ಆಸಕ್ತಿ. ಮುಂದೆ ನಾನು ಇನ್ನಷ್ಟು ಓದಬೇಕೆಂದಿದ್ದೇನೆ. ಪ್ರತಿದಿನ ಶಾಲೆಗೆ ರಿಕ್ಷಾದಲ್ಲಿ ಹೋಗಲು 200ರೂ. ಖರ್ಚಾಗುತ್ತದೆ. ಸರಕಾರದಿಂದ ನನಗೆ ತಿಂಗಳಿಗೆ 1,200 ರೂ. ವಿಕಲಚೇತನರ ಮಾಸಾಶನ ಸಿಗುತ್ತದೆ. ನನ್ನ ಓದುವ ಆಸೆಗೆ ಮನೆಯಲ್ಲಿ ಬಡತನ ಅಡ್ಡಿಯಾಗುತ್ತಿದೆ' ಎಂದು ವಸಂತ ಹೇಳಿದರು.
‘ವಸಂತ ವಿಕಲಚೇತನನಾದರೂ ಓದುವುದರಲ್ಲಿ ಬಹಳ ಆಸಕ್ತಿ. ತುಂಬಾ ಚಟುವಟಿಕೆಯಿಂದ ಇರುವ ಈತ ತೆವಳಿಕೊಂಡೆ ಶಾಲೆಗೆ ಬರುತ್ತಾನೆ. ಬಡತನ ಹಾಗೂ ಅಂಗವೈಕಲ್ಯದ ನಡುವೆ ಎಸೆಸೆಲ್ಸಿ ಉತ್ತೀರ್ಣನಾಗಿರುವುದು ಬಹಳ ದೊಡ್ಡ ಸಾಧನೆಯೇ ಆಗಿದೆ’ ಎಂದು ಬಿದ್ಕಲ್‌ಕಟ್ಟೆ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಸಂತ ಶೆಟ್ಟಿ ತಿಳಿಸಿದರು.







