ಚುನಾವಣೆ ಪ್ರಜಾಸತ್ತಾತ್ಮಕ ಪ್ರಕ್ರಿಯೆ, ಅದರಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ: ಸುಪ್ರೀಂ

ಹೊಸದಿಲ್ಲಿ,ಮೇ 12: ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆಯಲಿರುವ ಪೌರ ಚುನಾವಣೆಗಾಗಿ ಸಿದ್ಧಗೊಳಿಸಿರುವ ಮತದಾರರ ಪಟ್ಟಿಯಲ್ಲಿ ಹೆಸರುಗಳು ಪುನರಾವರ್ತನೆ ಗೊಂಡಿವೆ ಎಂದು ಆರೋಪಿಸಿರುವ ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು,ಚುನಾವಣೆಯು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದ್ದು, ಅದರಲ್ಲಿ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಹೇಳಿದೆ.
ಮೇ 24ರಂದು ನಡೆಯಲಿರುವ ಚುನಾವಣೆಗಾಗಿ ಮತದಾರರ ಪಟ್ಟಿಯಲ್ಲಿನ ಒಟ್ಟು 4,79,369 ಹೆಸರುಗಳ ಪೈಕಿ 50,922 ಹೆಸರುಗಳನ್ನು ಪುನರಾವರ್ತಿಸಲಾಗಿದೆ ಎಂದು ಆರೋಪಿಸಿ ಭಿವಂಡಿಯ ನಿವಾಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲಾಗದು, ಇಲ್ಲದಿದ್ದರೆ ಅದು ಚುನಾವಣೆ ಯಲ್ಲಿ ಕೋಲಾಹಲವನ್ನೇ ಸೃಷ್ಟಿಸುತ್ತದೆ. ಹೆಚ್ಚುಕಡಿಮೆ ಪ್ರತಿಯೊಂದು ಮತದಾರರ ಪಟ್ಟಿಯ ಲ್ಲಿಯೂ ಹೆಸರುಗಳು ಪುನರಾವರ್ತನೆಗೊಂಡಿರುತ್ತವೆ. ಈ ಕಾರಣಕ್ಕಾಗಿ ನ್ಯಾಯಾಲಯವು ಚುನಾವಣೆಗೆ ತಡೆಯಾಜ್ಞೆ ನೀಡುತ್ತಿದ್ದರೆ ಭಾರತದಲ್ಲಿ ಚುನಾವಣೆಗಳೇ ನಡೆಯುವುದಿಲ್ಲ. ಅದು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿದೆ. ನಾವು ಈ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ನವೀನ್ ಸಿನ್ಹಾ ಅವರ ರಜಾಕಾಲದ ಪೀಠವು ಹೇಳಿತು.