"ಹಿರಿಯ ಮುಸ್ಲಿಮ್ ಸಾಹಿತಿ ಸನ್ಮಾನ"ಕ್ಕೆ ಬೊಳುವಾರು ಮುಹಮ್ಮದ್ ಕುಂಞಿ ಆಯ್ಕೆ

ಮಂಗಳೂರು, ಮೇ 12: ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ರಾಜ್ಯದ ಖ್ಯಾತ ಮುಸ್ಲಿಮ್ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವ ಮುಸ್ಲಿಮ್ ಲೇಖಕರ ಸಂಘದ 2016ನೆ ಸಾಲಿನ ಹಿರಿಯ ಸಾಹಿತಿ ಸನ್ಮಾನಕ್ಕೆ ಕನ್ನಡದ ಶ್ರೇಷ್ಠ ಕಾದಂಬರಿಕಾರ ಬೊಳುವಾರು ಮುಹಮ್ಮದ್ ಕುಂಞಿ ಆಯ್ಕೆಯಾಗಿದ್ದಾರೆ.
ಕನ್ನಡ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊದಲ ಬಾರಿಗೆ ಪರಿಚಯಿಸಿದ ಬೊಳುವಾರು ಮುಹಮ್ಮದ್ ಕುಂಞಿ, ಸೃಜನಶೀಲ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಪ್ರಶಸ್ತಿ ಪಡೆದ ದೇಶದ ಏಕೈಕ ಸಾಹಿತಿ. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಮೊತ್ತ ಮೊದಲ ಪ್ರಶಸ್ತಿಯೂ ಬೊಳುವಾರರ ಕೃತಿಗೆ ದಕ್ಕಿದೆ. ಕನ್ನಡದ ಪ್ರಮುಖ ಕತೆಗಾರರೆಂದೇ ಗುರುತಿಸಲ್ಪಡುವ ಇವರ ಕತೆ, ಕಾದಂಬರಿಗಳು ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಇವರ "ಪಾಪು ಗಾಂಧಿ ಬಾಪು ಆದ ಕತೆ" ಕಾದಂಬರಿಯ ಇಂಗ್ಲಿಷ್ ಅನುವಾದ "ಫ್ರೊಂ ಮೋನು ಟು ಮಹಾತ್ಮ"ವನ್ನು ಲಂಡನ್ನಿನ ಪೀಕ್ ಪಬ್ಲಿಶಿಂಗ್ ಹೌಸ್ ಪ್ರಕಟಿಸಿದೆ.
ಕಲ್ಕತ್ತಾದ ಭಾರತೀಯ ಭಾಷಾ ಸಂಸ್ಥಾನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ, ಆರ್ಯಭಟ ಗೌರವ ಪ್ರಶಸ್ತಿ, ದೆಹಲಿಯ ಕಥಾ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುನ್ನುಡಿ ಚಲನಚಿತ್ರದ ಕತೆಗೆ ರಾಜ್ಯ ಪ್ರಶಸ್ತಿ, ಪರಶುರಾಮ ಗೌರವ ಪ್ರಶಸ್ತಿ, ಅತಿಥಿ ಚಲನಚಿತ್ರದ ಸಂಭಾಷಣೆಗೆ ರಾಜ್ಯ ಪ್ರಶಸ್ತಿ, ಶಿವರಾಮ ಕಾರಂತ-ಬಾಲವನ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಚಡಗ ಗೌರವ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಗೌರವ ಪ್ರಶಸ್ತಿ, ಅಬುದಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಗೌರವ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿ, ಪುರಸ್ಕಾರಗಳು ಬೊಳುವಾರರ ಸಾಹಿತ್ಯ ಕೃಷಿಗೆ ಲಭಿಸಿವೆ.
ಮೇ 19ರಂದು ಸಂಜೆ 7:20ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬೊಳುವಾರು ಅವರನ್ನು ಸನ್ಮಾನಿಸಿ, ಗೌರವಿಸಲಾಗುವುದು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







