ಭಾರತ-ಪಾಕ್ ಸಂಬಂಧ ಹದಗೆಡಲು ಪಾಕ್ ಕಾರಣ : ಅಮೆರಿಕ
ಪಾಕ್ ಉಗ್ರ ಗುಂಪುಗಳು ನಿರಂತರ ಬೆದರಿಕೆ
.jpg)
ವಾಶಿಂಗ್ಟನ್, ಮೇ 12: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಹದಗೆಡಲು ಪಾಕಿಸ್ತಾನ ಕಾರಣ ಎಂದು ಅಮೆರಿಕದ ಟ್ರಂಪ್ ಆಡಳಿತ ಹೇಳಿದೆ ಹಾಗೂ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಗುಂಪುಗಳು ಅಮೆರಿಕ, ಭಾರತ ಮತ್ತು ಅಫ್ಘಾನಿಸ್ತಾನಗಳಿಗೆ ನಿರಂತರ ಬೆದರಿಕೆಯಾಗಿವೆ ಎಂದಿದೆ.
‘‘ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಗುಂಪುಗಳು ವಲಯದಲ್ಲಿರುವ ಅಮೆರಿಕದ ಹಿತಾಸಕ್ತಿಗಳಿಗೆ ನಿರಂತರ ಬೆದರಿಕೆಯೊಡ್ಡುತ್ತಿವೆ ಹಾಗೂ ಭಾರತ ಮತ್ತು ಅಫ್ಘಾನಿಸ್ತಾನಗಳಲ್ಲಿ ದಾಳಿ ನಡೆಸುವುದನ್ನು ಮುಂದುವರಿಸಿವೆ’’ ಎಂದು ಬೇಹುಗಾರಿಕೆ ಕುರಿತ ಸೆನೆಟ್ ಆಯ್ಕೆ ಸಮಿತಿಯ ಸಮ್ಮುಖದಲ್ಲಿ ಸಾಕ್ಷ ನೀಡಿದ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡೇನಿಯಲ್ ಕೋಟ್ಸ್ ಹೇಳಿದರು.
‘‘ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಗುಂಪುಗಳಿಂದ ಅಮೆರಿಕ ಮತ್ತು ಪಶ್ಚಿಮದ ದೇಶಗಳಿಗೆ ಬೆದರಿಕೆ ಮುಂದೆಯೂ ಇರುತ್ತದೆ, ಆದರೆ ಅದರ ತೀವ್ರತೆ ಕಡಿಮೆಯಾಗಬಹುದು. ಅಮೆರಿಕದ ಪ್ರಧಾನ ನೆಲದ ಮೇಲೆ ದಾಳಿ ನಡೆಸುವ ಪಿತೂರಿಯನ್ನು ಈ ಭಯೋತ್ಪಾದಕ ಗುಂಪುಗಳಲ್ಲಿರುವ ಸದಸ್ಯರ ವೈಯಕ್ತಿಕ ಮರ್ಜಿಯನ್ನು ಅವಲಂಬಿಸಿದೆ’’ ಎಂದರು.
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧದಲ್ಲಿ ಉಂಟಾಗಿರುವ ಬಿರುಕು 2016ರಲ್ಲಿ ಪಠಾಣ್‌ಕೋಟ್ ಮತ್ತು ಉರಿ ದಾಳಿಗಳಿಗೆ ಕಾರಣವಾಯಿತು ಎಂದು ಅವರು ಹೇಳಿದರು. ಪಾಕಿಸ್ತಾನದಿಂದ ಗಡಿ ದಾಟಿ ಭಾರತಕ್ಕೆ ಬಂದ ಭಯೋತ್ಪಾದಕರು ಆ ದಾಳಿಗಳನ್ನು ನಡೆಸಿದರು ಎಂದರು.
‘‘ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕ ಕೃತ್ಯಗಳು ಮುಂದುವರಿದರೆ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಬಹುದು’’ ಎಂದು ಡೇನಿಯಲ್ ಅಭಿಪ್ರಾಯಪಟ್ಟರು.







