ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳ ಕಡೆಗಣನೆ: ಬುಡಕಟ್ಟು ಜನರಿಂದ ಧರಣಿ

ಮಡಿಕೇರಿ ಮೇ 12 : ಹುಲಿ ಸಂರಕ್ಷಣಾ ಪ್ರಾಧಿಕಾರದ ಹೆಸರಿನಲ್ಲಿ ಆದಿವಾಸಿಗಳನ್ನು ಎತ್ತಂಗಡಿ ಮಾಡಬಾರದು ಮತ್ತು ಸಮುದಾಯ ಹಕ್ಕು ಪತ್ರವನ್ನು ವಿಳಂಬ ಮಾಡದೆ ನೀಡಬೇಕೆಂದು ಒತ್ತಾಯಿಸಿ ಬುಡಕಟ್ಟು ಕೃಷಿಕರ ಸಂಘದ ನೇತೃತ್ವದಲ್ಲಿ ಆದಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಧರಣಿ ನಡೆಸಿದರು.
ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಆದಿವಾಸಿಗಳು ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಆದಿವಾಸಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ತಲೆತಲಾಂತರಗಳಿಂದ ಕೊಡಗು ಜಿಲ್ಲೆಯಲ್ಲೇ ನೆಲೆ ನಿಂತಿರುವ ಕಾಡಿನ ಮಕ್ಕಳನ್ನು ಎತ್ತಂಡಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಆದಿವಾಸಿ ಕುಟುಂಬಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಆದಿವಾಸಿ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕಾನೂನಿನ ಪ್ರಕಾರ ಬುಡಕಟ್ಟು ಆದಿವಾಸಿ ಜನರಿಗೆ ಮುಖ್ಯವಾಗಿ ಸಿಗಬೇಕಾಗಿದ್ದ ಆದಿವಾಸಿಗಳ ಸಮುದಾಯ ಅರಣ್ಯ ಭೂಮಿಯ ಹಕ್ಕುಪತ್ರ ಹಾಗೂ ವೈಯಕ್ತಿಕ ಭೂಮಿಯ ಹಕ್ಕುಪತ್ರ ಇನ್ನೂ ಲಭ್ಯವಾಗಿಲ್ಲ. ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿದ್ದರೂ, ಅದನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಸಂಘದ ಅಧ್ಯಕ್ಷರಾದ ಜೆ.ಪಿ.ರಾಜು ಬೇಸರ ವ್ಯಕ್ತಪಡಿಸಿದರು.
ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ದಿಡ್ಡಳ್ಳಿಯಲ್ಲಿ ಮೂಲತಃ ಇದ್ದ 56 ಕುಟುಂಬಗಳಿಗೆ ದಿಡ್ಡಳ್ಳಿಯಲ್ಲೇ ಅರಣ್ಯ ಭೂಮಿ ಹಾಗೂ ವಾಸಿಸಲು ಮನೆ ಹಾಗೂ ಇತರ ಮೂಲ ಸೌಲ್ಯಗಳನ್ನು ಒದಗಿಸಬೇಕು. ಕಾಫಿ ತೋಟಗಳಲ್ಲಿ ಜೀತದಾಳುಗಳಾಗಿ ದುಡಿದು ದಿಡ್ಡಳ್ಳಿಗೆ ಬಂದು ನೆಲೆಸಿದ್ದ ಆದಿವಾಸಿ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ಭೂಮಿಯನ್ನು ಗುರುತಿಸಿ ವ್ಯವಸಾಯಕ್ಕೆ ಕನಿಷ್ಟ 5 ಎಕರೆ ಭೂಮಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಜೆ.ಪಿ.ರಾಜು ಒತ್ತಾಯಿಸಿದರು.
ಈ ಸಂದರ್ಭ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಕೆ.ರಾಮು, ಸೋಮವಾರಪೇಟೆಯ ಅಧ್ಯಕ್ಷ ಆರ್.ಕೆ.ಚಂದ್ರು, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದರು.







