ಆದಿತ್ಯನಾಥ್ ಭೇಟಿ ಮುಗಿಸಿ ಬರುವಾಗ ಜಪಾನ್ ರಾಯಭಾರಿಯ ಕಾರು ನಾಪತ್ತೆಯಾಗಿದ್ದು ಹೇಗೆ?

ಉತ್ತರ ಪ್ರದೇಶ, ಮೇ 12: ಜಪಾನ್ ರಾಯಭಾರಿ ಕೆಂಜಿ ಹಿರಾಮಸು ಅವರು ಉತ್ತರ ಪ್ರದೇಶ ಸಿಎಂ ಆದಿತ್ಯನಾಥರನ್ನು ಭೇಟಿಯಾಗಿದ್ದ ವೇಳೆ ಹಿರಾಮಸು ಅವರ ಕಾರು ಮಾಯವಾಗಿತ್ತು. ತಪ್ಪಾಗಿ ಪಾರ್ಕಿಂಗ್ ಮಾಡಲಾಗಿದೆ ಎಂದು ಉತ್ತರಪ್ರದೇಶ ಟ್ರಾಫಿಕ್ ಪೊಲೀಸರು ಜಪಾನ್ ರಾಯಭಾರಿಯ ಕಾರು ಎನ್ನುವುದನ್ನೂ ಅರಿಯದೇ ತಮ್ಮ ಕರ್ತವ್ಯ ನಿಷ್ಠೆ ಪಾಲಿಸಿದ್ದರು!.
ವಿಧಾನಭವನದ ಗೇಟ್ ನಂಬರ್ 2ರ ಬಳಿ ಬಿಳಿಬಣ್ಣದ ಎಸ್ ಯುವಿ ಕಾರೊಂದನ್ನು ನಿಲ್ಲಿಸಲಾಗಿದೆ ಎಂದು ಟ್ರಾಫಿಕ್ ಎಎಸ್ ಪಿ ಹಬೀಬುಲ್ ಹಸನ್ ಹೇಳಿದ್ದರು. ನಂತರ ಚಲನ್ ನೀಡುವ ಸಲುವಾಗಿ ಕಾರನ್ನು ಹಝ್ರತ್ ಗಂಜ್ ಕಸ್ಮಂಡಾ ಹೌಸ್ ಗೆ ಎತ್ತಂಗಡಿ ಮಾಡಲಾಗಿತ್ತು.
ಆದರೆ ಖಾಸಗಿ ಏಜೆನ್ಸಿಯೊಂದರ ಮಾಲಕತ್ವದ ಕಾರನ್ನು ಜಪಾನ್ ರಾಯಭಾರಿ ಉಪಯೋಗಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿದುಬಂದಿದ್ದು, ಚಲನ್ ನೀಡದೆ ಕಾರನ್ನು ಹಿಂತಿರುಗಿಸಲಾಯಿತು. ಇಕನಾಮಿಕ್ಸ್ ಟೈಮ್ಸ್ ವರದಿಗಾರರೊಬ್ಬರು ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿರಾಮಸು ಅಲ್ಲಿಂದ ಹಿಂದಿರುಗಲು ತಮ್ಮ ಕಾರೊಂದನ್ನು ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.





