ಎಸೆಸೆಲ್ಸಿ: ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಉಡುಪಿ ಜಿಲ್ಲೆ

ಪಲ್ಲವಿ ಪ್ರಭು ವಿಜೇತ ಪ್ರಭು
ಉಡುಪಿ, ಮೇ 12: ಗುರುವಾರವಷ್ಟೇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಮೂರು ವರ್ಷಗಳ ಬಳಿಕ ಅಗ್ರಸ್ಥಾನವನ್ನು ಪಡೆದಿದ್ದ ಉಡುಪಿ ಜಿಲ್ಲೆ, ಇಂದು ಪ್ರಕಟವಾದ ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲೂ ದ್ವಿತೀಯ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ನೆಗೆದು, ರಾಜ್ಯದ ಅಗ್ರಗಣ್ಯ ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಭಾಜನವಾಯಿತು.
ಕಳೆದ ವರ್ಷ 89.72 ಶೇ. ಉತ್ತೀರ್ಣತೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅಗ್ರಸ್ಥಾನವನ್ನು ಒಪ್ಪಿಸಿ ದ್ವಿತೀಯ ಸ್ಥಾನಕ್ಕಿಳಿದಿದ್ದ ಉಡುಪಿ ಜಿಲ್ಲೆ, ಈ ಬಾರಿ ಫಲಿತಾಂಶದಲ್ಲಿ ಸಾಕಷ್ಟು ಹಿನ್ನಡೆ ಕಂಡರೂ 84.23 ಶೇ. ಫಲಿತಾಂಶದೊಂದಿಗೆ ರಾಜ್ಯದಲ್ಲೇ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಬೆಂಗಳೂರು ಗ್ರಾಮಾಂತರ ಈ ಬಾರಿ 10ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಉಡುಪಿ ಜಿಲ್ಲೆ ಈ ಮೊದಲು 2012 ಹಾಗೂ 2015ರಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿತ್ತು.
ನೆರೆಯ ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಒಂದು ಸ್ಥಾನ ಮೇಲಕ್ಕೇರಿ ಎರಡನೇ (82.39) ಸ್ಥಾನವನ್ನು ಅಲಂಕರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇದು ದ.ಕ.ದ ಉತ್ತಮ ಸಾಧನೆ ಎನಿಸಿಕೊಂಡಿತು. ಈ ಮೂಲಕ ಈ ಸಲದ ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳೆರಡರಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡ ಸಾಧನೆ ಮಾಡಿದವು.
ಈವರೆಗೆ ಸಿಕ್ಕಿದ ಮಾಹಿತಿಗಳಂತೆ ಉಡುಪಿ ಜಿಲ್ಲೆಯಲ್ಲಿ ಎರಡು ಶಾಲೆಗಳು ಶೇ.100 ಫಲಿತಾಂಶ ಪಡೆದಿದೆ. ಇವುಗಳೆಂದರೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಗುಂಡ್ಮಿಯ ಸರಕಾರಿ ಪ್ರೌಢ ಶಾಲೆ.
ಅಗ್ರಸ್ಥಾನಿಗರು: ಕುಂದಾಪುರ ತಾಲೂಕಿನ ಇಬ್ಬರು ಸರಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ತಲಾ 622 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಯಲ್ಲೇ ಅತ್ಯಧಿಕ ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು. ಉಪ್ಪುಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ರಂಜಿತಾ ಆಚಾರ್ಯ ಹಾಗೂ ಬೈಂದೂರು ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಮಂಜೇಶ್ ಶೇರಿಗಾರ್ ಈ ಸಾಧಕ ವಿದ್ಯಾರ್ಥಿಗಳು.
ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಸಾಂದೀಪನ ಆಂಗ್ಲ ಮಾಧ್ಯಮ ಶಾಲೆಯ ವಿಜೇತ ಎಸ್.ಪ್ರಭು 621 ಅಂಕಗಳನ್ನು ಗಳಿಸಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದ್ದರೆ, ಉಡುಪಿ ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮಶಾಲೆಯ ಪಲ್ಲವಿ ಪ್ರಭು ಹಾಗೂ ಕುಂದಾಪುರ ಶ್ರೀವೆಂಕಟರಣ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ ಶೆಟ್ಟಿ ತಲಾ 620 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.







