ಸನ್‌ರೈಸರ್ಸ್‌ಗೆ ಗುಜರಾತ್ ವಿರುದ್ಧ ಮಾಡು-ಮಡಿ ಪಂದ್ಯ

ಕಾನ್ಪುರ, ಮೇ 12: ಹತ್ತನೆ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್ ಹಂತಕ್ಕೇರಲು ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಿಸುತ್ತಿರುವ ಹಾಲಿ ಚಾಂಪಿಯನ್ ಸನ್‌ರೈಸರ್ಸ್ ತಂಡ ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಹಾಗೂ ಪುಣೆ ವಿರುದ್ಧ ಸತತ ಸೋಲು ಅನುಭವಿಸಿದ್ದ ಸನ್‌ರೈಸರ್ಸ್ ತಂಡ ಹೈದರಾಬಾದ್‌ನಲ್ಲಿ ನಡೆದಿದ್ದ ಕಳೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮುಂಬೈ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ವಾರ್ನರ್ ಪಡೆ ಮುಂದಿನ ಸುತ್ತಿಗೇರುವ ವಿಶ್ವಾಸ ಜೀವಂತವಾಗಿರಿಸಿಕೊಳ್ಳಲು ಗುಜರಾತ್ ವಿರುದ್ಧ ಜಯ ಸಾಧಿಸಲೇಬೇಕಾಗಿದೆ.
13 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿ ಒಟ್ಟು 15 ಅಂಕವನ್ನು ಗಳಿಸಿರುವ ಸನ್‌ರೈಸರ್ಸ್ ಪ್ರಸ್ತುತ ಅಂಕಪಟ್ಟಿಯಲ್ಲಿ 4ನೆ ಸ್ಥಾನದಲ್ಲಿದೆ. 13 ಪಂದ್ಯಗಳಲ್ಲಿ ಕೇವಲ 8 ಅಂಕ ಗಳಿಸಿರುವ ಲಯನ್ಸ್ ತಂಡ ಈಗಾಗಲೇ ಸ್ಪರ್ಧೆಯಿಂದ ಹೊರ ನಡೆದಿದೆ.
ಒಂದು ವೇಳೆ ಸನ್‌ರೈಸರ್ಸ್ ತಂಡ ಗುಜರಾತ್ ವಿರುದ್ಧ ಸೋತರೆ, ಸನ್‌ರೈಸರ್ಸ್‌ನ ಪ್ಲೇ-ಆಫ್ ವಿಶ್ವಾಸ ರವಿವಾರ ನಡೆಯಲಿರುವ ಪುಣೆ ಹಾಗೂ ಪಂಜಾಬ್ ನಡುವಿನ ಪಂದ್ಯವನ್ನು ಅವಲಂಬಿಸಲಿದೆ. ಹೈದರಾಬಾದ್ ಪ್ಲೇ-ಆಫ್‌ಗೆ ತೇರ್ಗಡೆಯಾಗಬೇಕಾದರೆ ಪುಣೆ ತಂಡ ಪಂಜಾಬ್‌ನ್ನು ಮಣಿಸಬೇಕು.
ಶನಿವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಫೇವರಿಟ್ ತಂಡವಾಗಿದ್ದು, ಟೂರ್ನಿಯ ಸಮತೋಲಿತ ತಂಡವಾಗಿದೆ. ವಾರ್ನರ್ ಹಾಗೂ ಭುವನೇಶ್ವರ ಕುಮಾರ್ ಕ್ರಮವಾಗಿ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್‌ಗಳನ್ನು ಪಡೆದುಕೊಂಡಿದ್ದಾರೆ.
ಸನ್‌ರೈಸರ್ಸ್‌ನ ಪರ ವಾರ್ನರ್ ಹಾಗೂ ಶಿಖರ್ ಧವನ್ ಗರಿಷ್ಠ ಸ್ಕೋರ್ ದಾಖಲಿಸಿದ್ದು, ಈ ವರ್ಷದ ಟೂರ್ನಿಯ ಗರಿಷ್ಠ ಸ್ಕೋರರ್ ಆಗಿದ್ದಾರೆ. ತಲಾ 12 ಪಂದ್ಯಗಳಲ್ಲಿ 535 ಹಾಗೂ 450 ರನ್ ಗಳಿಸಿರುವ ವಾರ್ನರ್ ಹಾಗೂ ಧವನ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸಿದ್ದಾರ್ಥ್ ಕೌಲ್ ಹಾಗೂ ರಶೀದ್ ಖಾನ್ ಕ್ರಮವಾಗಿ 15 ಹಾಗೂ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಗುಜರಾತ್ ತಂಡ ಈ ತನಕ ಸ್ಥಿರ ಪ್ರದರ್ಶನ ನೀಡಿಲ್ಲ. ಆದರೆ, ಹೈದರಾಬಾದ್‌ಗೆ ಸೋಲುಣಿಸುವ ಶಕ್ತಿ ಅದಕ್ಕಿದೆ. ಲಯನ್ಸ್ ತಂಡದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ಗಳಿದ್ದು, ನಾಯಕ ಸುರೇಶ್ ರೈನಾ ಟೂರ್ನಿಯಲ್ಲಿ ಈ ತನಕ 440 ರನ್ ಗಳಿಸಿದ್ದಾರೆ.
ಅಗ್ರ-2 ಸ್ಥಾನಕ್ಕಾಗಿ ಮುಂಬೈ-ಕೋಲ್ಕತಾ ಹೋರಾಟ
ಕೋಲ್ಕತಾ, ಏ 12: ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಗಿಟ್ಟಿಸಿಕೊಳ್ಳಲು ಹೋರಾಟ ನಡೆಸಲಿವೆ.
ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಉಭಯ ತಂಡಗಳು ಇತ್ತೀಚೆಗೆ ಸತತ ಸೋಲು ಕಂಡಿವೆ. ಮುಂಬೈ ಸತತ 2 ಪಂದ್ಯಗಳಲ್ಲಿ ಸೋತರೆ, ಕೆಕೆಆರ್ ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದಾರೆ.
ಪ್ಲೇ-ಆಫ್‌ಗೆ ತಲುಪಿದ ಮೊದಲ ತಂಡವೆನಿಸಿಕೊಂಡಿರುವ ಮುಂಬೈಗೆ ಈ ಫಲಿತಾಂಶದಿಂದ ದೊಡ್ಡ ಪರಿಣಾಮಬೀರುವುದಿಲ್ಲ. ಆದರೆ, ಕೋಲ್ಕತಾಕ್ಕೆ 18 ಅಂಕ ಗಳಿಸಿ ಎರಡನೆ ಸ್ಥಾನ ಪಡೆಯಲು ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.
ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಐಪಿಎಲ್ ಫೈನಲ್‌ಗೆ ತಲುಪಲು ಎರಡು ಅವಕಾಶ ಪಡೆಯುತ್ತವೆ. ಈ ಅವಕಾಶವನ್ನು ಬಾಚಿಕೊಳ್ಳಲು ಮುಂಬೈ(18) ಹಾಗೂ ಕೋಲ್ಕತಾ(16) ಪೈಪೋಟಿ ನಡೆಸುತ್ತಿವೆ.
ಕೋಲ್ಕತಾ ತಂಡ ಮುಂಬೈ ವಿರುದ್ಧ 5-14 ಹೆಡ್-ಟು-ಹೆಡ್ ದಾಖಲೆ ಹೊಂದಿದೆ. ಆದರೆ,ಕೋಲ್ಕತಾ ಪ್ಲೇ-ಆಫ್‌ಗೆ ಏರಿದ ತಂಡಗಳ ಪೈಕಿ ಉತ್ತಮ ರನ್‌ರೇಟ್(+0.729)ಹೊಂದಿದೆ. ಆರಂಭಿಕ ಆಟಗಾರನಾಗಿ ಸುನೀಲ್ ನರೇನ್ ಗಮನ ಸೆಳೆಯುತ್ತಿದ್ದಾರೆ. ಕೆಕೆಆರ್ ಅಗ್ರ-4 ಆಟಗಾರನನ್ನು ಹೆಚ್ಚು ನೆಚ್ಚಿಕೊಂಡಿದೆ. ಆಲ್‌ರೌಂಡರ್ ಯೂಸುಫ್ ಪಠಾಣ್ ಟೂರ್ನಿಯಲ್ಲಿ ಈತನಕ ಕೊಡುಗೆ ನೀಡಿಲ್ಲ. ಯೂಸುಫ್ ಕಳೆದ 8 ಪಂದ್ಯಗಳಲ್ಲಿ ಕೇವಲ 37 ರನ್ ಗಳಿಸಿದ್ದಾರೆ.
ಗುರುವಾರ ರಾತ್ರಿ ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ವಿರುದ್ಧ 231 ರನ್ ಗುರಿ ಪಡೆದಿದ್ದ ಮುಂಬೈ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತ್ತು.
ಇಂದಿನ ಪಂದ್ಯಗಳು
ಗುಜರಾತ್ ಲಯನ್ಸ್-ಸನ್‌ರೈಸರ್ಸ್ ಹೈದರಾಬಾದ್
ಸಮಯ: ಸಂಜೆ 4:00, ಸ್ಥಳ: ಕಾನ್ಪುರ
ಕೋಲ್ಕತಾ ನೈಟ್ ರೈಡರ್ಸ್-ಮುಂಬ್ಠೈ ಇಂಡಿಯನ್ಸ್
ಸಮಯ: ರಾತ್ರಿ 8:00, ಸ್ಥಳ: ಕೋಲ್ಕತಾ







